ಮೊದಲ ತುಳು ನಾಟಕ ಕೃತಿಕಾರ ಮಾಧವ ತಿಂಗಳಾಯರ ಸ್ಮರಣೆ
ಮಂಗಳೂರು: ಜನಸಾಮಾನ್ಯರಿಗೆ ಸಾಮಾಜಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ನಾಟಕ ಕಲೆಯನ್ನು ಪರಿಣಾಮಕಾರಿಯಾಗಿ ಬಳಸಿದ ಮಾಧವ ತಿಂಗಳಾಯರ ’ಜನಮರ್ಲ್’ ನಾಟಕವು ತುಳು ಭಾಷೆಯ ಮೊದಲ ಪ್ರಕಟಿತ ನಾಟಕವಾಗಿದೆ. ಇದು ಐತಿಹಾಸಿಕ ಮಹತ್ವವನ್ನು ಹೊಂದಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.
ಸಂಕೇತ ಮಂಗಳೂರು ಮತ್ತು ಸಿಂಗಾರ ಸುರತ್ಕಲ್ ಸಹಯೋಗದಲ್ಲಿ ನಗರದ ಹೊಯಿಗೆ ಬಜಾರ್‌ನಲ್ಲಿ ಮಾಧವ ತಿಂಗಳಾಯರ ಮನೆಯಲ್ಲಿ ನಡೆದ ತಿಂಗಳಾಯರ ಜನ್ಮ ದಿನದ ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಧವ ತಿಂಗಳಾಯರು ನಾಟಕ ರಂಗದಲ್ಲಿ ಮಾಡಿದ ಸಾಧನೆಯನ್ನು ಯುವ ಜನತೆಗೆ ಪರಿಚಯಿಸುವ ಮೂಲಕ ತುಳುನಾಡಿನ ನಾಟಕದ ಚರಿತ್ರೆಯನ್ನು ಸ್ಮರಿಸುವ ಕೆಲಸ ನಡೆಯಬೇಕಾಗಿದೆ. ಈ ವೇಳೆ ಸ್ವಾತಂತ್ರ್ಯಸಂಗ್ರಾಮಕ್ಕೆ ಪ್ರೇರಣೆಯಾಗಿದ್ದ ತಿಂಗಳಾಯರ ಮೂಲ ಮನೆ ಇಂದಿರಾ ಭವನ ಮತ್ತು ಮಹಾತ್ಮ ಗಾಂಧೀಜಿ ಅವರು ಸಭೆ ನಡೆಸಿದ್ದ ಶ್ರೀ ಜ್ಞಾನೋದಯ ಸಭಾಭವನವನ್ನು ಸಂರಕ್ಷಿಸುವ ಬಗ್ಗೆ ಚಿಂತಿಸಬೇಕಾಗಿದೆ ಎಂದು ತಾರಾನಾಥ್ ಗಟ್ಟಿ ಅಭಿಪ್ರಾಯಪಟ್ಟರು.
ಮಾಧವ ತಿಂಗಳಾಯರ ಅಳಿಯ ಹಾಗೂ ಸಾಹಿತಿ ಪ್ರೇಮಚಂದ್ರ ಕೆ. ತಿಂಗಳಾಯ, ಸಿಂಗಾರ ಸುರತ್ಕಲ್‌ನ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, ಸಂಕೇತ ಮಂಗಳೂರಿನ ಸಂಚಾಲಕ ಮತ್ತು ಕಲಾವಿದ ಜಗನ್ ಪವಾರ್ ಬೇಕಲ್ ಮಾತನಾಡಿದರು.
ಮಾಧವ ತಿಂಗಳಾಯರ ಮತ್ತೋರ್ವ ಅಳಿಯ ಪ್ರಫುಲ್ಲಚಂದ್ರ ತಿಂಗಳಾಯ, ಸಂಕೇತ ಮಂಗಳೂರಿನ ಅಧ್ಯಕ್ಷ ಹರೀಶ್, ಕಲಾವಿದ ರಾಜೇಂದ್ರ ಕೇದಿಗೆ ಉಪಸ್ಥಿತರಿದ್ದರು.