ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಗೆ ಯಕ್ಷಮಂಗಳ ಪ್ರಶಸ್ತಿ ಪ್ರದಾನ
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಇತ್ತೀಚೆಗೆ ನಡೆದಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಾರೋಗ್ಯದ ಕಾರಣದಿಂದ ಗೈರು ಹಾಜರಾಗಿದ್ದ ತೆಂಕು ತಿಟ್ಟಿನ ಖ್ಯಾತ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ ಸೋಮವಾರ ಮಂಗಳೂರು ವಿವಿಯಲ್ಲಿ ಯಕ್ಷಮಂಗಳ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದನಾ ಭಾಷಣ ಮಾಡಿದ ಜಾನಪದ ವಿದ್ವಾಂಸರಾದ ಡಾ.ಕೆ. ಚಿನ್ನಪ್ಪ ಗೌಡ ಅವರು, ಸದಾಶಿವ ಶೆಟ್ಟಿಗಾರ್ ಬಣ್ಣದ ಮಾಲಿಂಗರ ಶಿಷ್ಯರಾಗಿ ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಓರ್ವ ಪರಂಪರೆಯ ಸಮರ್ಥ ಹಿರಿಯ ಕಲಾವಿದರಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 42 ವರ್ಷಗಳ ಸುದೀರ್ಘವಾಗಿ ದುಡಿದು ಕಲಾಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರ ಆರೋಗ್ಯವು ಸುಧಾರಿಸಿ ಇನ್ನಷ್ಟು ಕಾಲ ಯಕ್ಷಗಾನ ಸೇವೆಯಲ್ಲಿ ದುಡಿಯುವಂತಾಗಲಿ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರು, ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರವು ಹಿರಿಯ ಯಕ್ಷಗಾನ ಕಲಾವಿದರ ಅನುಭವ ಕಥನದ ದಾಖಲೀಕರಣದೊಂದಿಗೆ ಮಹತ್ವದ ಕಾರ್ಯ ಮಾಡುತ್ತಿದೆ. ಜೊತೆಗೆ ಯಕ್ಷಮಂಗಳ ಪ್ರಶಸ್ತಿಯ ಮೂಲಕ ಹಿರಿಯ ಅರ್ಹ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯವಾ ಗಿದೆ. ಹಿರಿಯ ಕಲಾವಿದ ಸದಾಶಿವ ಶೆಟ್ಟಿಗಾರ್ ಅವರಿಗೆ ಅರ್ಹವಾಗಿಯೇ ಈ ಪ್ರಶಸ್ತಿ ಸಂದಿವೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸದಾಶಿವ ಶೆಟ್ಟಿಗಾರ್ ಅವರು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತ್ತೀಚಿಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಾಗಿಲ್ಲ ಎಂಬ ಕೊರಗು ಕಾಡು ತ್ತಿತ್ತು. ಇದೀಗ ಇಂದು ಆ ಕನಸು ನನಸಾಗಿದೆ.ಅರ್ಜಿ ಹಾಕದೇ ಗುರುತಿಸಿದ ವಿಶ್ವವಿದ್ಯಾನಿಲಯದ ಪ್ರತಿಷ್ಟಿತ ಪ್ರಶಸ್ತಿಯನ್ನು ಸ್ವೀಕರಿಸಿ ಧನ್ಯನಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಸಚಿವರಾದ ಕೆ.ರಾಜು ಮೊಗವೀರ, ಹಣಕಾಸು ಅಧಿಕಾರಿ ಪ್ರೊ.ವೈ ಸಂಗಪ್ಪ, ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ.ನಾಗಪ್ಪ ಗೌಡ, ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ, ಕಾರ್ಯಾಕಾರಿ ಅಭಿಯಂತರರಾದ ಲವ ಮಹಾದೇವಪ್ಪ, ವಿವಿಯ ಉಪ ಕುಲಸಚಿವರುಗಳಾದ ರೋಶನಿ, ಲಲಿತಾ, ಕುಲಪತಿಗಳ ಆಪ್ತ ಸಹಾಯಕರಾದ ಲತಾ,ಸಹಾಯಕ ಗೌತಂ,ಕೇಂದ್ರದ ಸಂಶೋಧನಾಧಿಕಾರಿ ಡಾ.ಸತೀಶ್ ಕೊಣಾಜೆ, ಸಿಬ್ಬಂದಿ ಸ್ವಾತಿ, ವಿವಿಧ ಪೀಠಗಳ ಸಂಶೋಧನ ಸಹಾಯಕರು ಸಿಬ್ಬಂದಿ ಭಾಗವಹಿಸಿದ್ದರು.