ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಕ್ಲಿಫರ್ಡ್ ಲೋಬೊ
ಮಂಗಳೂರು: ಪಾದುವ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಪರಿಸರ ಸಂಘ ಜಂಟಿಯಾಗಿ ವನಮಹೋತ್ಸದ ಆಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ಮಕ್ಕಳಿಗೆ ಗಿಡವನ್ನು ವಿತರಿಸುವ ಮೂಲಕ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ ಮಾತನಾಡಿ, ಗಿಡ ನೆಡುವುದು ಮತ್ತು ಅವುಗಳನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಎಲ್ಲಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ.ಅರುಣ್ ವಿಲ್ಸನ್ ಲೋಬೋ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಹಾಗೂ ಪ್ರತಿಯೊಬ್ಬರೂ ಗಿಡವನ್ನು ನೆಟ್ಟು ಪರಿಸರವನ್ನು ಸಂರಕ್ಷಣೆ ಮಾಡಬೇಕೆಂದು ಕರೆಕೊಟ್ಟರು.
ಪರಿಸರ ಸಂಘದ ಯೋಜನಾಧಿಕಾರಿ ಸಹನಾ, ಎನ್ನೆಸ್ಸೆಸ್ ಸಹ ಯೋಜನಾಧಿಕಾರಿ ಅನಿಲ್ ಡಿಮೆಲ್ಲೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಯತಿರಾಜ್ ಸ್ವಾಗತಿಸಿದರು. ದೀಪ್ತಿ ಡಿಸೋಜ ವಂದಿಸಿದರು. ಪ್ರಿನ್ಸಿಯಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.