×
Ad

ಪಠ್ಯೇತರ ಪುಸ್ತಕಗಳ ಓದಿನಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಸಾಧ್ಯ: ಉಮರ್ ಯು.ಎಚ್.

Update: 2025-07-09 18:34 IST

ಮಂಗಳೂರು, ಜು.9: ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳಿಗೆ ಜೋತು ಬೀಳದೆ, ಪಠ್ಯೇತರ ಪುಸ್ತಕಗಳ ಓದಿನ ಮೂಲಕ ಜ್ಞಾನ ಸಂಪಾದನೆ ಮಾಡಿ ಆತ್ಮವಿಶ್ವಾಸ ಮೂಡಿಸಲು ಸಾಧ್ಯ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ನಗರದ ಬದ್ರಿಯಾ ಶೈಕ್ಷಣಿಕ ಸಂಸ್ಥೆಗಳ ಸಹಯೋಗ ದೊಂದಿಗೆ ಬದ್ರಿಯಾ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ’ಬ್ಯಾರಿ ಸಾಹಿತ್ಯ ಕಮ್ಮಟ’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯನ್ನು ಹೊಂದಿದರೆ ಮಾತ್ರ ಸಾಧಕರಾಗಲು ಸಾಧ್ಯ, ಕನಸುಗಾರರಾಗಿ ಬೆಳೆಯಬೇಕಾದ ಯುವ ಜನಾಂಗ ಮಾತೃ ಭಾಷೆಯ ಸೇವೆಗೂ ಮುಂದಾಗಬೇಕು ಎಂದು ಉಮರ್ ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಬದ್ರಿಯಾ ಪಪೂ ಕಾಲೇಜಿನ ಪ್ರಾಂಶುಪಾಲೆ ಸೀಮಾ ಎ.ಕೆ. ಭಾಗವಹಿಸಿ ಶುಭ ಹಾರೈಸಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಉಳ್ಳಾಲ ಘಟಕದ ಅಧ್ಯಕ್ಷೆ ಸಿಹಾನ ಬಿ.ಎಂ. ಸಂಪನ್ಮೂಲ ವ್ಯಕಿಯಾಗಿ ಭಾಗವಹಿಸಿ ಬ್ಯಾರಿ ಸಾಹಿತ್ಯ ಕಮ್ಮಟ ನಡೆಸಿಕೊಟ್ಟರು.

ಅಕಾಡಮಿ ಸದಸ್ಯರಾದ ಹಾಜಿ ಯು.ಕೆ. ಹಮೀದ್, ಹಮೀದ್ ಹಸನ್ ಮಾಡೂರು, ಬಿ.ಎಸ್. ಮುಹಮ್ಮದ್, ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ, ಬದ್ರಿಯಾ ಪಪೂ ಕಾಲೇಜಿನ ಮಾಜಿ ಪ್ರಾಂಶುಪಾಲ ಯೂಸುಫ್ ಡಿ, ಪ್ರಾಧ್ಯಾಪಕರಾದ ಸಫ್ವಾನ್ ಕೆ, ಪುಟ್ಟಸ್ವಾಮಿ ಹಾಗೂ ಯಾಕೂಬ್ ಕಲ್ಲರ್ಪೆ ಮತ್ತಿತರರು ಉಪಸ್ಥಿತರಿದ್ದರು.

ಬ್ಯಾರಿ ಅಕಾಡಮಿ ಸದಸ್ಯೆ, ಕಾರ್ಯಕ್ರಮದ ಸಂಚಾಲಕಿ ಶಮೀರಾ ಜಹಾನ್ ಸ್ವಾಗತಿಸಿದರು. ಅಕಾಡಮಿ ಸದಸ್ಯ ಯು.ಎಚ್. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಅಬ್ದುಲ್ ರಹೀಮ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News