×
Ad

ಪಡುಬಿದ್ರೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2025-07-10 19:47 IST

ಪಡುಬಿದ್ರಿ: ಬಿಜೆಪಿಗರಿಗೆ ಸುಳ್ಳೇ ಮನೆ ದೇವರು. ಬಿಜೆಪಿ ತನ್ನ ಚುನಾವಣಾ ಪೂರ್ವ ಘೋಷಣೆಗಳನ್ನು ಯಾವತ್ತೂ ಜಾರಿಗೊಳಿಸಿಲ್ಲ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಟೀಕೆ ಮಾಡಿದರು.

ಇತ್ತೀಚೆಗೆ ಬಿಜೆಪಿ ಸಾರ್ವಜನಿಕ ಸಭೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಮಾಡಿರುವ ಸುಳ್ಳು ಆರೋಪ ಗಳು ಹಾಗೂ ಕೇಂದ್ರ ಬಿಜೆಪಿ ಸರಕಾರದ ವೈಫಲ್ಯಗಳ ವಿರುದ್ದ ಗುರುವಾರ ಪಡುಬಿದ್ರಿ ಗ್ರಾಮ ಪಂಚಾಯಿತಿ ಮುಂಭಾಗ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಸಂವಿಧಾನದ ತಿದ್ದುಗಳನ್ನೆಷ್ಟೇ ಮಾಡಿದ್ದರೂ ಅದು ಸಮಾಜ ವಾದದ ಮೇಲೆ ವಿಶ್ವಾಸವಿರಿಸಿರುವ ಕಾಂಗ್ರೆಸ್ ಬಡವರ ಒಳಿತಿಗಾಗಿಯೇ ಮಾಡಿದೆ. ಹೀಗಿರುವಾಗ ಸಂವಿಧಾನದ ಅಡಿಪಾಯವಾಗಿರುವ ಜಾತ್ಯತೀತತೆ ಮತ್ತು ಸಮಾಜವಾದವನ್ನು ಪೀಠಿಕೆಯಿಂದ ತೆಗೆಯಬೇಕೆಂದು ಬಿಜೆಪಿ ಮತ್ತು ಆರೆಸ್ಸೆಸ್ ಒತ್ತಾಯಿಸುತ್ತಿದೆ.

ಕಾಂಗ್ರೆಸ್‍ನ ರಾಜ್ಯ ಸರಕಾರವು ಸಿದ್ಧರಾಮಯ್ಯು ಮುಖ್ಯಮಂತ್ರಿಯಾಗಿ ಆರೇ ತಿಂಗಳಲ್ಲಿ ಪಂಚ ಗ್ಯಾರಂಟಿಯನ್ನು ಜಾರಿಗೊಳಿಸಿದೆ. ರಾಜ್ಯದ 95ಶೇಕಡಾ ಮಹಿಳೆಯರು ಗೃಹಲಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತಿಂಗಳಿಗೆ 1ಕೋಟಿ ರೂ. ಬರುತ್ತಿದೆ. ಬಿಜೆಪಿಯ ಯಾವ ಯೋಜನೆಗಳೂ ಇಷ್ಟು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಆದರೂ ಗ್ಯಾರಂಟಿ ಯೋಜನಾ ಫಲಾನುಭವಿಗಳ ಸಭೆಯಲ್ಲಿ ಶಾಸಕರಿಗೆ ಭಾಗವಹಿಸಲಾಗುತ್ತಿಲ್ಲ.

ಶಾಸಕರಿಗೆ ತಿಳಿದಿಲ್ಲವೇ?: ಗ್ಯಾರಂಟಿ ಯೋಜನೆಗಳನ್ನು ಯಾವತ್ತೂ ನಿಲ್ಲಿಸುವುದಿಲ್ಲವೆಂದೂ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಹಾಗಿದ್ದೂ ಅಭಿವೃದ್ಧಿ ಕಾಮಗಾರಿಗಳಿಗಾಗಿ 25ಕೋಟಿ ರೂ. ಲೋಕೋಪಯೋಗಿ ಇಲಾಖೆಗೆ ಹಾಗೂ ಸಮುದ್ರ ಕೊರೆತ ತಡೆ ಕಾಮಗಾರಿಗಳಿಗೆ 83ಕೋಟಿ ರೂ. ಬಿಡುಗಡೆಯಾಗಿದ್ದು ಶಾಸಕರಿಗಿದು ತಿಳಿದಿಲ್ಲವೇ ಎಂದು ಸೊರಕೆ ಪ್ರಶ್ನಿಸಿದರು.

ಶಾಸಕರಿಗೆ ಸೊರಕೆ ಸವಾಲು: ಬಡವರು ಕಳದ ಹಲವು ವರ್ಷಗಳಿಂದ ಪ್ರಾಮಾಣಿಕ ಹೋರಾಟವನ್ನು ಮಾಡುತ್ತಿರುವ ಹಕ್ಕುಪತ್ರ ವಿಚಾರ, ಅಕ್ರಮ ಸಕ್ರಮ ಮುಂತಾದವುಗಳ ಬಗೆಗೆ ಎಳ್ಳಷ್ಟೂ ಬಡವರ ಬಗ್ಗೆ ಕಾಳಜಿ ಇಲ್ಲದಿರುವ ಕಾಪು ಶಾಸಕರು ಮೊದಲಿಗೆ ಸುಜ್ಲಾನ್ ಪ್ರದೇಶದಲ್ಲಿ ತಮ್ಮ ಭೂಮಿಯ ಕುರಿತು ಬಹಿರಂಗಪಡಿಸಲಿ ಎಂದು ವಿನಯಕುಮಾರ್ ಸೊರಕೆ ಸವಾಲೆಸೆದಿದ್ದಾರೆ.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಕಾಂಗ್ರೆಸ್ ಮುಖಂಡರಾದ ನವೀನ್‍ಚಂದ್ರ ಜೆ.ಶೆಟ್ಟಿ, ಅಬ್ದ್ದುಲ್ ಅಜೀಜ್ ಹೆಜಮಾಡಿ, ವಿಶ್ವಾಸ್ ಅಮೀನ್, ಕಾಪು ದಿವಾಕರ ಶೆಟ್ಟಿ, ನಿಯಾಜ್, ನವೀನ್ ಎನ್. ಶೆಟ್ಟಿ, ರಮೀಜ್ ಹುಸೈನ್, ಕರುಣಾಕರ ಪೂಜಾರಿ, ಗಣೇಶ್ ಕೋಟ್ಯಾನ್, ಅಬ್ದ್ದುಲ್ ರಹಿಮಾನ್ ಕನ್ನಂಗಾರ್, ಶಾಂತಲತಾ ಶೆಟ್ಟಿ, ಸಂಜೀವಿ ಪೂಜಾರ್ತಿ, ಜ್ಯೋತಿ ಮೆನನ್ ಮತ್ತಿತರರಿದ್ದರು.

ಎಲ್ಲೆಲ್ಲಿ ಪ್ರತಿಭಟನೆ: ಹಕ್ಕು ಪತ್ರ, ಮನೆ ನಿವೇಶನ ನೀಡಲು ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವ ಅಧಿಕಾರಿ ವರ್ಗಗಳ ತಾರತಮ್ಯ ನೀತಿಯನ್ನು ವಿರೋಧಿಸಿ, ಹಾಗೂ 9/11 ಪ್ರಕ್ರಿಯೆಯನ್ನು ಜಟಿಲಗೊಳಿಸಿ ರುವ ಬಗ್ಗೆ ಮತ್ತು ವೃದ್ಧಾಪ್ಯ ವೇತನದ ಬಗ್ಗೆ ಬಿಜೆಪಿ ಮೂಡಿಸುತ್ತಿರುವ ಗೊಂದಲಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ವಿನಯ್ ಕುಮಾರ್ ಸೊರಕೆ ಯವರ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಯಿತು.

ಹೆಜಮಾಡಿ, ಪಡುಬಿದ್ರಿ, ಪಲಿಮಾರು, ತೆಂಕ ಎರ್ಮಾಳ್, ಉಚ್ಚಿಲ ಬಡಾ, ಬೆಳಪು ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News