×
Ad

ಉದ್ಯಮಿಗಳ ಹುಮ್ಮಸ್ಸು ಪುನಶ್ಚೇತನಗೊಳಿಸಲಿದೆ ‘ಬೊಲ್ಪು’: ಸಂಸದ ಬ್ರಿಜೇಶ್ ಚೌಟ

Update: 2025-07-12 17:36 IST

ಮಂಗಳೂರು: ಕುಡ್ಲದಿಂದ ಹೊರ ಹೋಗಿ ವಿದೇಶಗಳಲ್ಲಿ ಯಶಸ್ಸು ಕಂಡಿರುವ ಉದ್ಯಮಿಗಳನ್ನು ಮತ್ತೆ ತಾಯ್ನಾಡಿಗೆ ಬಂದು ಇಲ್ಲಿ ಕೊಡುಗೆ ನೀಡುವಲ್ಲಿ ಪ್ರೇರೇಪಿಸುವ ಜತೆಗೆ ಉದ್ಯಮಿಗಳ ಹುಮ್ಮಸ್ಸು ಪುನಶ್ಚೇತನಗೊಳಿಸುವ ವೇದಿಕೆಯಾಗಿ ‘ಬೊಲ್ಪು’ ಕಾರ್ಯ ನಿರ್ವಹಿಸಲಿದೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ‘ಬೊಲ್ಪು’ ಸಂಘಟನೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಂಗಳೂರು ಹಲವು ಉದ್ಯಮಗಳನ್ನು ನೋಡಿದೆ, ಬೀಡಿ ಉದ್ಯಮವು ಕರಾವಳಿಯಲ್ಲಿ ಮಾಡಿದ ಕ್ರಾಂತಿ ಅದ್ಭುತವಾಗಿದೆ. ಅಲ್ಲಿಂದ ಗೋಡಂಬಿ ವಹಿವಾಟಿನವರೆಗೂ ಜಿಲ್ಲೆಯಲ್ಲಿ ಹಲವು ಯಶಸ್ವಿ ಉದ್ಯಮಿಗಳಿ ದ್ದಾರೆ. ಇದು ಸ್ಫೂರ್ತಿದಾಯಕ. ಈ ಸ್ಪೂರ್ತಿಯ ಯಶೋಗಾಥೆಗಳನ್ನು ಹೇಳುವಂತಾಗಬೇಕು. ಆ ಪರಿಕಲ್ಪನೆಯೊಂದಿಗೆ ಬೊಲ್ಪು ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.

ಇಸ್ರೇಲ ಭೇಟಿ ವೇಳೆ ಅಲ್ಲಿನ ರಾಯಭಾರಿಯವರನ್ನು ಭೇಟಿಯಾಗಿದ್ದೆನೆ. ನಮ್ಮ ಜಿಲ್ಲೆಯಲ್ಲಿ ಸೀಮಿತ ಪ್ರಮಾಣದಲ್ಲಿರುವ ಕೃಷಿಭೂಮಿಯನ್ನು ಪರಿಣಾಮಕಾರಿಯಾಗಿ ಕೃಷಿಗೆ ಬಳಕೆ ಮಾಡುವುದಕ್ಕೆ ಇಸ್ರೆಲ್ ತಂತ್ರಜ್ಞಾನದ ಉಪಯೋಗದ ಬಗ್ಗೆ ಚರ್ಚಿಸಿದ್ದೆನೆ. ಮುಖ್ಯವಾಗಿ ಮಹಿಳೆಯರು ತಮ್ಮ ಸಣ್ಣ ಭೂಮಿ ಯಲ್ಲೂ ತರಕಾರಿ-ಹಣ್ಣು ಬೆಳೆಸಿ ರಫ್ತು ಮಾಡುವುದಕ್ಕೆ ಉತ್ತೆಜನ ನೀಡಬಹುದು, ಅಂತಹ ಕಾರ್ಯಕ್ಕೂ ಬೊಲ್ಪುನೆರವಾಗಲಿದೆ. ಕೇವಲ ಕೆಟ್ಟಕಾರಣಗಳಿಗೆ ಮಂಗಳೂರು ಸುದ್ದಿಯಾಗುತ್ತಿರುವ ಮಂಗಳೂರು ಉದ್ಯಮಿಗಳ ಸ್ಫೂರ್ತಿದಾಯಕ ವಿಚಾರಗಳಿಂದ ಪ್ರಚಾರ ಪಡೆಯಬೇಕಿದೆ. ವರ್ಷಕ್ಕೆ ಕನಿಷ್ಟ 10ರಂತೆ ಮುಂದಿನ ಐದು ವರ್ಷಗಳಲ್ಲಿ ಸುಮಾರು 50 ರಷ್ಟು ಯಶೋಗಾಥೆಗಳನ್ನು ಪ್ರಪಂಚದ ಮುಂದೆ ತೆರೆದಿಡುವುದು ಈ ಬೊಲ್ಪುವಿನ ಪ್ರಮುಖ ಉದ್ದೇಶ ಎಂದವರು ಹೇಳಿದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಎಲ್ಲ ಸಂಪನ್ಮೂಲಗಳೂ ಇವೆ. ಯಾವುದೇ ಉದ್ಯಮಕ್ಕೆ ಇನ್ನಷ್ಟು ಅವಕಾಶ ಕಲ್ಪಿಸಿದರೆ ಅದು ಬಹಳ ದೊಡ್ಡದಾಗಿ ಬೆಳೆಯಬಹುದು. ಹೊಸ ಉದ್ಯಮಿಗಳಿಗೆ ಅವಕಾಶ ಕೊಟ್ಟರೆ ಜಿಲ್ಲೆ ಅಭಿವೃದ್ಧಿಯಾಗಬಹುದು ಎನ್ನುವ ದೂರದೃಷ್ಟಿಯನ್ನು ಯುವ ಸಂಸದ ಚೌಟ ಅವರು ಹೊಂದಿದ್ದಾರೆ, ಇದು ಉತ್ತಮ ಪರಿಕಲ್ಪನೆ ಎಂದು ಶ್ಲಾಘಿಸಿದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ರೋಹಿತ್, ವತಿಕಾ ಪೈ, ಪರಣೀತ್ ರಾವ್ ಮೊದಲಾದವರು ಉಪಸ್ಥಿತರಿದ್ದರು.

ಬೊಲ್ಪು ವೇದಿಕೆಯ ಕಾರ್ಯನಿರ್ವಾಹಕ ಪಾಲುದಾರರಾದ ಜಾನ್ಸನ್ ಟೆಲ್ಲಿಸ್ ಬೊಲ್ಪು ವೇದಿಕೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಮುಂಬೈ ಹಾಗೂ ವಿದೇಶದಲ್ಲಿ ಯಶಸ್ವಿಯಾಗಿ ಗುರುತಿಸಿಕೊಂಡಿರುವ ಕುಡ್ಲ ಮೂಲದ ಉದ್ಯಮಿಗಳಾದ ಸುಬ್ರಹ್ಮಣ್ಯ ರಾವ್, ಪ್ರೀತಂ ಹೆಗ್ಡೆ, ಶ್ರೀವತ್ಸ ಪ್ರಭಾಕರ್, ಕಾಂಚನ, ಶ್ರೀಧರ್ ಮೊದಲಾದವರು ವೀಡಿಯೋ ಕಾನ್ಫರೆನ್ಸ್ ಮೂಲಕ ನೂತನ ಆವಿಷ್ಕಾರಕ್ಕೆ ಶುಭ ಹಾರೈಸಿ, ಬೆಂಬಲ ಸೂಚಿಸಿದರು.





 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News