ಕೋಮುವಾದ ನಾಶಕ್ಕೆ ಸೈದ್ಧಾಂತಿಕ ಸಂಘರ್ಷ ಅಗತ್ಯ: ಮುನೀರ್ ಕಾಟಿಪಳ್ಳ
ಉಳ್ಳಾಲ, ಜು.13: ಜಿಲ್ಲೆಯಲ್ಲಿ ನಡೆಯುವ ಧರ್ಮದ್ವೇಷಗಳು ಕೊನೆಗೊಳ್ಳಲು ತಾತ್ಕಾಲಿಕ ರಾಜಕೀಯ ಬದಲಾವಣೆಯ ಜೊತೆಗೆ ಸೈದ್ಧಾಂತಿಕ ಸಂಘರ್ಷಗಳ ಅಗತ್ಯವಿದೆ. ಆವಾಗ ಮಾತ್ರ ಕೋಮುವಾದವನ್ನು ನಾಶಪಡಿಸಲು ಸಾಧ್ಯವಿದೆ ಎಂದು ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
ಡಿವೈಎಫ್‌ಐ ಕುತ್ತಾರ್ ಹಾಗೂ ಗಂಡಿ ಘಟಕದ ವತಿಯಿಂದ ಕುತ್ತಾರ್ ಸಮುದಾಯ ಭವನದಲ್ಲಿ ರವಿವಾರ ನಡೆದ ಸೌಹಾರ್ದ ಯುವ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ವಕೀಲ ರಾಮಚಂದ್ರ ಬಬ್ಬುಕಟ್ಟೆ ಮಾತನಾಡಿ ತುಳುನಾಡಿನ ಶಿಕ್ಷಣ ಕ್ಷೇತ್ರದಲ್ಲಿ ಧರ್ಮಾಧಾರಿತ ಸಂಸ್ಥಗಳಿಂದ ಸೌಹಾರ್ದಕ್ಕೆ ಧಕ್ಕೆಯಾಗಿದೆ. ಈ ಹಿಂದೆ ಹಿಂದೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯ ಗಳು ಒಂದೇ ಬೆಂಚ್‌ನಲ್ಲಿ ಕೂರುವ ಸ್ಥಿತಿ ಇತ್ತು. ಆದರೆ ಈಗ ಒಂದೊಂದು ಧರ್ಮಕ್ಕೆ ಶಾಲೆಗಳು ನಡೆಯುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು ಎಂದರು.
ನಿತಿನ್ ಕುತ್ತಾರ್ ಅಧ್ಯಕತೆ ವಹಿಸಿದ್ದರು. ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿದರು. ಈ ಸಂದರ್ಭ ಮುನ್ನೂರು ಗ್ರಾಪಂ ಉಪಾಧ್ಯಕ್ಷ ಮಹಾಬಲ ಟಿ. ದೆಪ್ಪೆಲಿಮಾರ್, ಸದಸ್ಯರಾದ ಮುಸ್ತಾಫ್, ಡಿವೈಎಫ್‌ಐ ಮುಖಂಡರಾದ ಇಮ್ರಾನ್ ಗಂಡಿ, ಮಿಥುನ್ ಕುತ್ತಾರ್, ಸುರೇಶ್ ತಲೆನೀರು, ಶಿವಾನಿ ಕೊಲಂಬೆ ಉಪಸ್ಥಿತರಿದ್ದರು.
ಸುನೀಲ್ ತೇವುಲ ಪ್ರಾಸ್ತಾವಿಕವಾಗಿ ಮಾತಾಡಿದರು. ದಿವ್ಯರಾಜ್ ತೇವುಲ ಸ್ವಾಗತಿಸಿದರು. ಸರ್ಫರಾಜ್ ಗಂಡಿ ವಂದಿಸಿದರು.