×
Ad

ಧರ್ಮಸ್ಥಳ ಪ್ರಕರಣದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಲಿ: ಎಸ್‌ಡಿಪಿಐ

Update: 2025-07-15 20:32 IST

ಮಂಗಳೂರು: ಧರ್ಮಸ್ಥಳ ವಿರುದ್ಧ ಬರುತ್ತಿರುವ ಆರೋಪಗಳು ಹೊಸದೇನಲ್ಲ. ಹಲವು ವರ್ಷದಿಂದ ನಡೆಯುತ್ತಿರುವ ಅಲ್ಲಿನ ಅಸಹಜ ಸಾವಿನ ಪ್ರಕರಣ ಎಲ್ಲರಿಗೂ ತಿಳಿದ ವಿಚಾರವಾಗಿದೆ. ಅಲ್ಲಿ ನಾಲ್ಕು ದಶಕದಿಂದ ನೂರಾರು ಕೊಲೆಗಳಾಗಿವೆ. ಧರ್ಮಸ್ಥಳ ಪ್ರಕರಣದ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನುರಿತ ಅಧಿಕಾರಿಗಳ ತಂಡದಿಂದ ಸಮಗ್ರ ತನಿಖೆಯಾಗಬೇಕು ಎಂದು ಎಸ್‌ಡಿಪಿಐ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಒತ್ತಾಯಿಸಿದ್ದಾರೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಪ್ರಕರಣ ಬೆಳಕಿಗೆ ಬಾರದಂತೆ ತಡೆಯುವಲ್ಲಿ ಕಾಂಗ್ರೆಸ್-ಬಿಜೆಪಿ ಭಾಗಿಯಾಗಿವೆ. ಹಾಗಾಗಿ ಆ ಪಕ್ಷೀಯರಿಗೆ ಇದೀಗ ಭಯವಾಗಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಬಲಾಢ್ಯರನ್ನು ಮಣಿಸಿದ ಇತಿಹಾಸ ಕಾನೂನಿಗೆ ಇದೆ. ಧರ್ಮಸ್ಥಳ ಪ್ರಕರಣವನ್ನು ನಾಗರಿಕ ಸಮಾಜ ಯಾವತ್ತೂ ಒಪ್ಪಲು ಸಾಧ್ಯವಿಲ್ಲ. ಹಿಂದೂ ಸಮುದಾಯ ಈ ವಾಸ್ತವ ಸಂಗತಿಯನ್ನು ಅರ್ಥಮಾಡಿಕೊಂಡು ಪ್ರಕರಣದ ಸತ್ಯಾಸತ್ಯತೆಗೆ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳಬೇಕಿದೆ ಎಂದು ಹೇಳಿದರು.

ಇತ್ತೀಚೆಗೆ ಅಲ್ಲಿನ ಮಾಜಿ ಕೆಲಸಗಾರನೊಬ್ಬ ತಾನು ಸಾಕ್ಷಿ ಹೇಳಲು ಸಿದ್ಧ ಎಂದಿದ್ದಾರೆ. ಆದಾಗ್ಯೂ ರಾಜ್ಯ ಸರಕಾರ ಈ ಪ್ರಕರಣವನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಧರ್ಮಸ್ಥಳ ಗ್ರಾಪಂ ಆಡಳಿತವು ಯಾರನ್ನೋ ರಕ್ಷಿಸಲು ಮುಂದಾಗಿದೆ. ಜಿಲ್ಲೆಯ ಸಂಘಪರಿವಾರದ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಶಾಸಕ ಹರೀಶ್ ಪೂಂಜಾರ ಧ್ವನಿ ಅಡಗಿದೆ. ಜಿಲ್ಲಾ ಎಸ್ಪಿ ಡಾ.ಅರುಣ್ ಕುಮಾರ್ ತನಿಖೆಗೆ ಮಾರ್ಗದರ್ಶನ ನೀಡುತ್ತಿದ್ದರೂ ಅವರ ಅಧೀನ ಅಧಿಕಾರಿಗಳು ಧರ್ಮಸ್ಥಳದ ಪರವಾಗಿದ್ದಾರೆ ಎಂಬುದನ್ನು ಅರ್ಥ ಮಾಡಬೇಕಿದೆ ಎಂದು ಅನ್ವರ್ ಸಾದಾತ್ ಬಜತ್ತೂರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷೆ ಶಾಹಿದಾ ತಸ್ನೀಮ್, ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಇನಾಸ್ ರೊಡ್ರಿಗಸ್, ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಜಮಾಲ್, ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಉಪಸ್ಥಿತರಿದ್ದರು.

ಜು.17ರಂದು ಧರ್ಮಸ್ಥಳದಲ್ಲಿ ಪ್ರತಿಭಟನೆ

ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣವನ್ನು ಸಮರ್ಪಕವಾಗಿ ತನಿಖೆ ನಡೆಸಲು ಆಗ್ರಹಿಸಿ ಎಸ್‌ಡಿಪಿಐ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದೆ. ಆರಂಭಿಕ ಹಂತವಾಗಿ ಜು.17ರಂದು ಅಪರಾಹ್ನ 3ಕ್ಕೆ ಧರ್ಮಸ್ಥಳದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News