ನಕಲಿ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ವಂಚನೆ: ಪ್ರಕರಣ ದಾಖಲು
ಮಂಗಳೂರು, ಜು.17: ಕಂಪೆನಿಯೊಂದರ ಮ್ಯಾನೇಜಿಂಗ್ ಡೈರೆಕ್ಟರ್ ಹೆಸರಿನಲ್ಲಿ ಅಕೌಂಟೆಂಟ್‌ಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ 26 ಲಕ್ಷ ರೂ. ವಂಚಿಸಿರುವ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.15ರಂದು ಎಂಡಿ ಅರವಿಂದ ಕುಮಾರ್ ಹೆಸರಿನಲ್ಲಿ ಸಂಸ್ಥೆಯಲ್ಲಿ ಕೆಲಸ ಮಾಡುವ ಅಕೌಂಟೆಂಟ್‌ಗೆ ಸಂದೇಶ ಕಳುಹಿಸಿದ ಅಪರಿಚಿತ ವ್ಯಕ್ತಿಯು ನಾನು ಅರವಿಂದ ಕುಮಾರ್. ಇದು ನನ್ನ ಹೊಸ ವಾಟ್ಸಾಪ್ ಸಂಖ್ಯೆ ಸೇವ್ ಮಾಡಿ ಎಂದಿದ್ದಾನೆ. ಪ್ರೊಫೈಲ್‌ನಲ್ಲಿ ಎಂಡಿಯ ಭಾವಚಿತ್ರವೂ ಇದ್ದುದರಿಂದ ಅಕೌಂಟೆಂಟ್ ಅದನ್ನು ನಂಬಿ ಸೇವ್ ಮಾಡಿದ್ದಳು.ಜು.16ರಂದು ಆ ನಂಬರ್‌ನಿಂದ ಕಂಪೆನಿಯ ಖಾತೆಯಲ್ಲಿ ಬಾಕಿಯಿ ರುವ ಮೊತ್ತ ಎಷ್ಟೆಂದು ಸಂದೇಶ ಬಂದಿದ್ದು, ಅದನ್ನು ಎಂಡಿಯೇ ಕಳುಹಿಸಿದ ಮಾಹಿತಿ ಎಂದು ನಂಬಿದ ಯುವತಿಯು ಕಂಪೆನಿಯ ಖಾತೆಯಲ್ಲಿ ಬಾಕಿ ಇರುವ ಹಣದ ವಿವರವನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದಳು. ತಕ್ಷಣ ಆತ ಬೇರೊಂದು ಪ್ರಾಜೆಕ್ಟ್‌ಗೆ ಮುಂಗಡ ಹಣ ಪಾವತಿ ಮಾಡಬೇಕಿರುವುದರಿಂದ ತಾನು ತಿಳಿಸುವ ಖಾತೆಗೆ 26 ಲಕ್ಷ ರೂ. ಪಾವತಿಸುವಂತೆ ಸೂಚಿಸಿದ್ದ. ಅದನ್ನು ನಂಬಿದ ಯುವತಿಯು ಆತ ತಿಳಿಸಿದ ಖಾತೆಗೆ ಆರ್‌ಟಿಜಿಎಸ್ ಮೂಲಕ 26 ಲಕ್ಷ ರೂ. ವರ್ಗಾಯಿಸಿದ್ದಾಳೆ.
ಈ ವಿಚಾರ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್‌ಗೆ ತಿಳಿದು ಕರೆ ಮಾಡಿದಾಗ ಆನ್‌ಲೈನ್ ಮೂಲಕ ತಾನು ಮೋಸ ಹೋಗಿರುವುದು ಅರಿವಾಗಿದೆ. ಈ ಬಗ್ಗೆ ಕಂಪೆನಿಯ ಮ್ಯಾನೇಜರ್ ಮನೋಜ್ ಕುಮಾರ್ ಜೇಸಿ ಪಾಟೀಲ್ ಸೆನ್ ಠಾಣೆಗೆ ದೂರು ನೀಡಿದ್ದಾರೆ.