ಫೇಸ್‌ಬುಕ್ ಜಾಹೀರಾತು ಕ್ಲಿಕ್ ಮಾಡಿ ಹಣ ಕಳಕೊಂಡ ವ್ಯಕ್ತಿ!
ಮಂಗಳೂರು, ಜು.17: ಫೈನಾನ್ಸ್ ಬಗ್ಗೆ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತಿಗೆ ಕ್ಲಿಕ್ ಮಾಡಿದ ದೂರು ದಾರರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ 5.94 ಲಕ್ಷ ರೂ. ವಂಚಿಸಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.14ರಂದು ಫೇಸ್‌ಬುಕ್‌ನಲ್ಲಿ ಬಂದ ಫೈನಾನ್ಸ್‌ಗೆ ಸಂಬಂಧಿಸಿದ ಜಾಹೀರಾತನ್ನು ಕ್ಲಿಕ್ ಮಾಡಿದೆ. ಬಳಿಕ ಸುರೇಶ ಎಂಬ ಹೆಸರಿನ ವ್ಯಕ್ತಿ ತನಗೆ ವ್ಯಕ್ತಿ ಕರೆ ಮಾಡಿ 1.50 ಲಕ್ಷ ರೂ. ಲೋನ್ ಮಾಡಿ ಕೊಡುತ್ತೇನೆ. ದಾಖಲಾತಿಗಳನ್ನು ಕಳುಹಿಸಿ ಎಂದು ಕೇಳಿದ. ಅದರಂತೆ ತಾನು ವಾಟ್ಸ್‌ಆ್ಯಪ್ ಮೂಲಕ ದಾಖಲಾತಿ ಗಳನ್ನು ಕಳುಹಿಸಿದ್ದೆ. ಜೂ.14ರಂದು ಲೋನ್‌ನ ಕಂತು ಎಂದು 45,833 ರೂ., ಜೂ.16ರಂದು ಲೋನ್ ಚಾರ್ಜಸ್ 24,525 ರೂ. ಹಾಕುವಂತೆ ತಿಳಿಸಿದ ಮೇರೆಗೆ ಪಾವತಿ ಮಾಡಿದೆ. ಜೂ.17ರಂದು 38,750 ರೂ., 18ರಂದು 90 ಸಾವಿರ ರೂ., 19ರಂದು 45,500 ರೂ., 21ರಂದು ಜಿಎಸ್‌ಟಿ ಚಾರ್ಜಸ್ ಎಂದು 89,750 ರೂ., 25ರಂದು 37,124 ರೂ., 27ರಂದು ಟಿಡಿಎಸ್ ಚಾರ್ಜ್ ಎಂದು 1 ಲಕ್ಷ ರೂ. ಹಾಕಿದೆ. ಜೂ.28ರಂದು 32,500 ರೂ., ಜು.2ರಂದು 57,100, ಜು.7ರಂದು 33,030 ಹೀಗೆ ಹಂತ ಹಂತವಾಗಿ ಒಟ್ಟು 5,94,112 ರೂ. ಅಪರಿಚಿತ ವ್ಯಕ್ತಿಗೆ ಪಾವತಿ ಮಾಡಿರುವೆ. ಬಳಿಕ ತಾನು ಮೋಸ ಹೋಗಿರುವು ದಾಗಿ ಹಣ ಕಳಕೊಂಡ ವ್ಯಕ್ತಿಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.