ನಿರಂತರ ಮಳೆ: ಬಜ್ಪೆಯ ವಿವಿಧೆಡೆ ಗುಡ್ಡ ಕುಸಿತ
ಬಜ್ಪೆ; ಬುಧವಾರ ಸುರಿದ ನಿರಂತರ ಮಳೆಗೆ ಬಜ್ಪೆಯ ವಿವಿಧೆಡೆ ಗುಡ್ಡಕುಸಿತ ಸಂಭವಿಸಿರುವ ಘಟನೆಗಳು ವರದಿಯಾಗಿವೆ.
ಬಜ್ಪೆ - ಅದ್ಯಪಾಡಿ ರಸ್ತೆಯ ಇಲ್ಲೆಲದಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಇರುವ ಗುಡ್ಡ ಗುರುವಾರ ಬೆಳಗಿನ ಜಾವ ಸುಮಾರು ಅರ್ಧ ಕಿಲೋಮೀಟರ್ ಗಳಷ್ಟು ಕುಸಿದಿದೆ.
ಘಟನೆ ಬೆಳಗ್ಗಿನ ಜಾವ ನಡೆದಿದ್ದು, ಜನಸಂಚಾರ ವಿರಳವಿರುವ ಕಾರಣ ಗುಡ್ಡ ಕುಸಿತದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ರಸ್ತೆಯ ಬದಿ ಹಾಕಲಾಗಿದ್ದ ಸುಮಾರು 5 ವಿದ್ಯುತ್ ಕಂಬಗಳು ಧರೆಶಾಯಿಯಾಗಿವೆ.
ಘಟನಾ ಸ್ಥಳಕ್ಕೆ ಬಂದ ಸ್ಥಳೀಯರು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದ್ದು ಸಿಬ್ಬಂದಿ ಸ್ಥಳಕ್ಕೆ ಬಂದು ವಿದ್ಯುತ್ ಕಂಬಗಳನ್ನ ಪುನರ್ ಸ್ಥಾಪಿಸಿದ್ದಾರೆ ಮತ್ತು ಸ್ಥಳೀಯರು ಸೇರಿ ಸುಮಾರು ಅರ್ಧ ಮೀಟರ್ ಗಳಷ್ಟು ಬಜ್ಪೆ - ಅದ್ಯಪಾಡಿ ರಸ್ತೆಯಲ್ಲಿ ಇದ್ದ ಮಣ್ಣನ್ನು ತೆರೆವುಗೊಳಿಸಿದ್ದಾರೆ.
ಗುಡ್ಡ ಕುಸಿತದಿಂದ ಹಲವು ಗಂಟೆಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿತ್ತು. ಗುಡ್ಡ ಕುಸಿತದ ಮಣ್ಣು ತೆರವಾದ ಬಳಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಯಿತು.
ಸುರತ್ಕಲ್: ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವೆಡೆ ಬುಧವಾರದ ನಿರಂತರ ಭಾರೀ ಮಳೆ ಅಪಾರ ಹಾನಿ ಉಂಟುಮಾಡಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಇಲ್ಲಿನ ಮುಂಚೂರು ಎಂಬಲ್ಲಿ 6 ಮನೆಗಳಿಗೆ ನೀರು ನುಗ್ಗಿದೆ. ಮುಂಚೂರು ಸೇತುವೆ ಬಳಿಯ ವಿನೋದ್ ಬಂಗೇರ ಎಂಬವರ ಮನೆ ಸಂಪೂರ್ಣ ಜಲಾವೃತವಾಗಿದ್ದು, ಮನೆಯಲ್ಲಿದ್ದ ಸೋಫಾ, ವಿದ್ಯುತ್ ಉಪಕರಣಗಳು ನೀರುಪಾಲಾಗಿವೆ. ಸುಂದರಿ ಎಂಬ ವೃದ್ದೆಯೊಬ್ಬರ ಮನೆಗೆ ನೀರು ತುಂಬಿದ್ದು, ಸ್ಥಳೀಯ ಕಾರ್ಪೊರೇಟರ್ ಶ್ವೇತಾ ಪೂಜಾರಿ ನೇತೃತ್ವದಲ್ಲಿ ಅವರನ್ನು ರಕ್ಷಿಸಿ ಸ್ಥಳಾಂತರಿಸಲಾಗಿದೆ.
ಮುಕ್ಕ ಮಲ್ಲಮಾರು ಎಂಬಲ್ಲಿ ನಿರಂತರ ಭಾರೀ ಮಳೆಗೆ ಚಂಡಿಯ ನೀರು ಮನೆಗಳಿಗೆ ನುಗ್ಗಿರುವ ಘಟನೆ ವರದಿಯಾಗಿವೆ. ಅಲ್ಲದೆ, ಮಧ್ಯ, ಕೊಡಿಪಾಡಿ ಭಾಗದಲ್ಲೂ ಮನೆಗಳಿಗೆ ನೀರು ನುಗ್ಗಿರುವ ಘಟನೆಗಳು ವರದಿಯಾಗಿವೆ.
ಸುರತ್ಕಲ್ ಇಡ್ಯಾ ಪ್ರದೇಶದಲ್ಲಿನ ಖತೀಜಮ್ಮ ಮತ್ತು ರಾಬಿಯ ಎಂಬವರ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವುದು ವರದಿಯಾಗಿದೆ.
ಪಣಂಬೂರು: ಭಾರಿ ಮಳೆಯಿಂದಾಗಿ ಪಣಂಬೂರು ಎಂಸಿಎಫ್ ಬಳಿಯ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೊಣಕಾಲುದ್ದದ ವರೆಗೆ ನೀರು ತುಂಬಿಕೊಂಡ ಬಗ್ಗೆ ವರದಿಯಾಗಿದೆ.
ಬುಧವಾರ ಇಡೀ ದಿನ ಸುರಿದ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಉಡುಪಿ- ಮಂಗಳೂರು ರಸ್ತೆ ಸಂಪೂರ್ಣ ಜಲಾವೃತವಾಯಿತು. ದ್ವಿಚಕ್ರ ವಾಹನಗಳಿಗೆ ನೀರು ನುಗ್ಗಿ ಹಲವು ವಾಹನಗಳನ್ನು ತಳ್ಳಿಕೊಂಡುಹೋಗುವಂತಾಯಿತು. ಕಾರುಗಳು ನೀರಿನಲ್ಲಿ ತೇಲಿಕೊಂಡೆ ಸಂಚರಿಸುವಂತಾಯಿತು.