×
Ad

ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಯಾಗುವಲ್ಲಿ ರಕ್ಷಕ ಶಿಕ್ಷಕರ ಪಾತ್ರ ಮುಖ್ಯ: ಅಬ್ದುಲ್ ಸಲಾಂ

Update: 2025-07-19 23:41 IST

ಬಂಟ್ವಾಳ : ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು,ಶಿಕ್ಷಕರು, ಪೋಷಕರು ಮತ್ತು ಆಡಳಿತ ಮಂಡಳಿ ಎಂಬ ನಾಲ್ಕು ಮುಖ್ಯ ಆಧಾರ ಸ್ಥಂಭಗಳು ಅನ್ಯೋನ್ಯವಾಗಿ ಸಂವಹನ ನಡೆಸಿದಾಗ ಅಂತಹ ಸಂಸ್ಥೆಯ ವಿದ್ಯಾರ್ಥಿಗಳು ಭವಿಷ್ಯದ ಸಮಾಜದ ಅತ್ಯುತ್ತಮ ನಾಗರಿಕರಾಗುತ್ತಾರೆ ಎಂದು ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಸಲಾಂ ಅವರು ಹೇಳಿದರು.

ತುಂಬೆ ವಿದ್ಯಾ ಸಂಸ್ಥೆಗಳ ರಕ್ಷಕ-ಶಿಕ್ಷಕ ಸಂಘದ ಮಹಾ ಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತುಂಬೆ ಪಿಟಿಎಯ ದತ್ತಿ ನಿಧಿ ಸ್ಕಾಲರ್ ಶಿಪ್ ವಿತರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕೇವಲ ಅಂಕ ಗಳನ್ನು ಪಡೆಯುವುದನ್ನು ಉದ್ದೇಶವಾಗಿರಿಸದೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು, ವಿದ್ಯಾಭ್ಯಾಸದ ಜೊತೆಗೆ ಇತರ ಒಳ್ಳೆಯ ಹವ್ಯಾಸಗಳಿಂದಿಗೆ ಮಕ್ಕಳು ತಮ್ಮ ಪೋಷಕ ಮತ್ತು ಶಿಕ್ಷಕರಿಂದ ಜೀವನ ಶಿಕ್ಷಣವನ್ನೂ ಪಡೆದುಕೊಂಡು ತಮ್ಮ ದೇಶದ ಸತ್ಪ್ರಜೆಯಾಗುವಲ್ಲಿ ಪಣತೊಡಬೇಕು.ಆಗ ಶಿಕ್ಷಣದ ನಿಜಾರ್ಥವನ್ನು ನಾವು ಕಂಡುಕೊಂಡಂತೆ ಎಂದರು.

ಪಿಟಿಎಯ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಚಂದ್ರ ರೈ ದೇವಸ್ಯ ಮಾತನಾಡಿ ತುಂಬೆ ವಿದ್ಯಾ ಸಂಸ್ಥೆಯು ಕಳೆದ ಮೂರ್ನಾಲ್ಕು ದಶಕಗಳಿಂದ ಬಹಳ ಉತ್ತಮವಾದ ವಿದ್ಯಾರ್ಥಿಗಳನ್ನು ರೂಪಿಸಿ ಸಮಾಜಕ್ಕೆ ಅತ್ಯುನ್ನತ ಸ್ಥಾನಮಾನದ ನಾಗರಿಕರನ್ನಾಗಿ ಮಾಡುವಲ್ಲಿ ಯಶಸ್ಸನ್ನು ಕಂಡಿದೆ. ನನ್ನ ಮಕ್ಕಳೂ ಇದೇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ಔದ್ಯೋಗಿಕ ಮತ್ತು ಶಿಸ್ತಿನ ಜೀವನ ಶಿಕ್ಷಣದಲ್ಲಿ ಯಶಸ್ಸನ್ನು ಕಂಡಿದ್ದಾರೆ ಎಂದರು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ನಿಸಾರ್ ಅಹಮದ್ ವಳವೂರು ಮಾತನಾಡಿ, ತಮ್ಮ ಮಕ್ಕಳ ಕುರಿತಾಗಿ ಇರುವ ಸಮಸ್ಯೆಗಳನ್ನು ಸಂಯಮದಿಂದ ಪರಸ್ಪರ ಶಿಕ್ಷಕರೊಂದಿಗೆ, ಸಂಘದ ಮೂಲಕ ಮಾತಾಡಿ ಬಗೆಹರಿಸಿಕೊಂಡಾಗ ಅದು ವಿದ್ಯಾರ್ಥಿಗಳ ಪ್ರಗತಿಗೆ ಪೂರಕವಾಗುತ್ತದೆ ಎಂದರು.

ಪಿಟಿಎ ಉಪಾಧ್ಯಕ್ಷೆ ಮೋಹಿನಿ ಎಂ ಸುವರ್ಣ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾದ ಮ್ಯಾಕ್ಸಿಂ ಕುವೆಲ್ಲೋ, ಚಂಚಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ದಕ್ಷಿಣ ಎಸ್ ಸಾಲಿಯಾನ್, ಲಹರಿ ಜಿ.ಕೆ, ಬಿ.ಬಿ.ಅಶೂರ, ಅಶ್ವಿನಿ, ಮೆಹರುನ್ನೀಸಾ, ಝೈಬಾ ಸುಲ್ತಾನ, ನಮ್ರತಾ, ಮುಹಮ್ಮದ್ ಶಾಝಿನ್ ಜಿ., ಮುಹಮ್ಮದ್ ಸಿನಾನ್, ಅರ್ಶಿಯಾ ಅಶ್ರಫ್, ಮೊಹಮ್ಮದ್ ಹಸನ್ ಮೆಹರಾನ್, ವಾಸುಕಿ ಅಭಯ ಶರ್ಮ, ಭವಿಷ್, ಶಾಹಿಲ್ ಸಹಲಾ, ಮಹಮ್ಮದ್, ನಶಾಂತ್ ಮತ್ತು ನೌರೀನಾ ಇವರು ಪಿ.ಟಿ.ಎ ಎಂಡೋಮೆಂಟ್ ಸ್ಕಾಲರ್ ಶಿಪ್ ಸ್ವೀಕರಿಸಿದರು.

ಪ್ರಾಂಶುಪಾಲ ವಿ.ಎಸ್.ಭಟ್ ಪ್ರಸ್ತಾವನೆಗೈದರು. ಎಂ.ಇ.ಟಿ. ಮ್ಯಾನೇಜರ್ ಬಿ ಅಬ್ದುಲ್ ಕಬೀರ್ ಅವರು ವಿದ್ಯಾ ಸಂಸ್ಥೆಯ ಮೂಲಭೂತ ಸೌಕರ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿಚಾರ ಮಂಡಿಸಿ ದರು. ಆಡಳಿತಾಧಿಕಾರಿ ಕಿಶೋರ್ ಸುವರ್ಣ ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಕೆ ಸ್ವಾಗತಿಸಿ, ಆಂಗ್ಲ ಭಾಷಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮಲ್ಲಿಕಾ ಶೆಟ್ಟಿ ವಂದಿಸಿದರು. ಹಿರಿಯ ಶಿಕ್ಷಕಿ ವಿಮಲಾ ಕಾರ್ಯಕ್ರಮ ನಿರೂಪಿಸಿದರು.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News