×
Ad

ಎಂಆರ್‌ಪಿಎಲ್ ಹಸಿರು ವಲಯ ಭೂ ಸ್ವಾಧೀನ: ಪರಿಹಾರಕ್ಕೆ ಒಮ್ಮತ

Update: 2025-07-19 23:50 IST

ಮಂಗಳೂರು, ಜು.19: ಎಂಆರ್‌ಪಿಎಲ್ ಹಸಿರು ವಲಯ ನಿರ್ಮಾಣದ ಹಿನ್ನೆಲೆಯಲ್ಲಿ 27 ಎಕರೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನಿರ್ವಸಿತರಿಗೆ ಸೂಕ್ತ ಪರಿಹಾರ ಒದಗಿಸಲು ನಿರ್ಧರಿಸಲಾಗಿದೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.

ಪ್ರತಿ ಎಕರೆಗೆ 80 ಲಕ್ಷ ರೂ. ಪರಿಹಾರ, ಉದ್ಯೋಗ ಬದಲು ಪ್ರತಿ ಕುಟುಂಬಕ್ಕೆ 20 ಲಕ್ಷ ರೂ. ನಗದು ಮತ್ತು ನಿವೇಶನ ಸೇರಿದಂತೆ ಪರಿಹಾರ ನೀಡಲು ಎಂಆರ್‌ಪಿಎಲ್ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಹಲವು ವರ್ಷಗಳಿಂದ ಬಾಕಿ ಇರುವ ಈ ವಿಷಯವನ್ನು ಎಲ್ಲರಿಗೂ ತೃಪ್ತಿಕರವಾಗಿ ಇತ್ಯರ್ಥ ಪಡಿಸಬೇಕು. ನಿರ್ವಸಿತರ ಸಮಸ್ಯೆಯ ತೀವ್ರತೆ ತನಗೆ ಅರಿವಿದ್ದು, ಉತ್ತಮ ಪ್ಯಾಕೇಜ್ ದೊರಕಬೇಕು ಎಂದು ಸಂಸದರು ಹೇಳಿದರು.

27 ಎಕರೆಯಲ್ಲಿ 408 ಡೋರ್ ನಂಬರ್‌ಗಳಿವೆ. ಸಮೀಕ್ಷೆಯಂತೆ 93.96 ಕೋ.ರೂ.ಭೂಸ್ವಾಧೀನ ಮತ್ತಿತರ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ನಡೆಸಿದ ಕೆಪಿಟಿ ಸಂಸ್ಥೆ ವರದಿ ನೀಡಿದೆ.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ಎಂಆರ್‌ಪಿಎಲ್ ಸಲ್ಲಿಸಿರುವ ಪ್ಯಾಕೇಜ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದರು.

ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಎಂಆರ್‌ಪಿಎಲ್ ಎಂ.ಡಿ. ಶ್ಯಾಂಪ್ರಸಾದ್, ಕೆಐಎಡಿಬಿ ಭೂಸ್ವಾಧೀನಾಧಿಕಾರಿ ರಾಜು, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.

ಭೂಸ್ವಾಧೀನಗೊಳ್ಳುವ 27 ಎಕರೆ ಜಮೀನು ಜೋಕಟ್ಟೆ ಮತ್ತು ಬಾಳ ಗ್ರಾಪಂ ಹಾಗೂ ಬಜಪೆ ಪಪಂ ವ್ಯಾಪ್ತಿಯಲ್ಲಿದ್ದು, ಈ ಪ್ರದೇಶಗಳಲ್ಲಿ ಹೊಸದಾಗಿ ಡೋರ್‌ನಂಬರ್‌ಗಳನ್ನು ನೀಡದಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News