ಬಂಟ್ವಾಳ: ಕಾಂಗ್ರೆಸ್ ವತಿಯಿಂದ ಜನಜಾಗೃತಿ ಅಭಿಯಾನ
ಬಂಟ್ವಾಳ : ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿಯ ಕೋಮುದ್ವೇಷದ ಅಂಗಡಿಯನ್ನು ಬಂದ್ ಮಾಡಿ ಸಾಮರಸ್ಯದ ಪ್ರಯೋಗ ಶಾಲೆಯನ್ನಾಗಿ ಮಾಡುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಜಿ.ಹೆಗ್ಡೆ ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಬಿ.ಮೂಡ ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ ಗುರುವಾರ ಬಿ.ಸಿ. ರೋಡಿನಲ್ಲಿ ನಡೆದ "ಜನಜಾಗೃತಿ ಅಭಿಯಾನ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸುಳ್ಳಿನಿಂದಲೇ ಹುಟ್ಟಿಕೊಂಡಿರುವ ಬಿಜೆಪಿ ಪಕ್ಷವು ಕೇವಲ ಹಿಂದುತ್ವದ ಹೆಸರಿನಲ್ಲಿ ಸುಳ್ಳುಗಳ ಮೂಲಕ ಜನರನ್ನು ವಂಚಿಸುತ್ತಿದ್ದು, ದೇಶದ ಸಂವಿಧಾನದ ಬದಲಾವಣೆಯ ಆಶಯವನ್ನು ಹೊಂದಿದೆ ಎಂದು ಆರೋಪಿಸಿದರು.
ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಎರಡು ವಿರೋಧಾ ಭಾಸದ ಸಂಘಟನೆಗಳ ನಡುವಿನ ಗಲಭೆಗಳು ನಡೆಯುತ್ತಿದೆ ಹೊರತು ಹಿಂದೂ ಮುಸ್ಲಿಂ ಗಲಭೆಗಳು ನಡೆಯುತ್ತಿಲ್ಲ ಎಂದ ಅವರು ಬಂಟ್ವಾಳದಲ್ಲಿ ಅಕ್ರಮ ಸಕ್ರಮ ಸಮಿತಿಯಾಗಿ ಒಂದೂವರೆ ವರ್ಷ ಕಳೆದರೂ ಒಂದೇ ಒಂದು ಸಬೆ ಮಾಡದ, 2 ವರ್ಷಗಳಿಂದ ಒಂದೇ ಒಂದು ಕೆಡಿಪಿ ಸಭೆ ಕರೆಯದ , ಕ್ಷೇತ್ರದಲ್ಲಾದ ಮರಣದಲ್ಲೂ ತಾರತಮ್ಯ ಮಾಡಿರುವ ರಾಜೇಶ್ ನಾಯ್ಕ್ ಅವರು ಓರ್ವ ಜನದ್ರೋಹಿ ಶಾಸಕ ಎಂದು ಟೀಕಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಸರ್ಕಾರ ಯಾವತ್ತೂ ಹಿಂದುಳಿದವರ , ಬಡವರ ಪರವಾಗಿ ನಿಂತಿದೆ ಹೊರತು ಬಂಡವಾಳ ಶಾಹಿಗಳ ಪರ ಅಲ್ಲ , ಬಂಡವಾಳ ಶಾಹಿಗಳ ಸಾಲಮನ್ನಾ ದಿಂದ ದೇಶಕ್ಕೆ ಆರ್ಥಿಕ ಹೊಡೆತ ಬಿದ್ದಿದೆ, ಗ್ಯಾರಂಟಿ ಯೋಜನೆ ಗಳಿಂದಾಗಿ ಮದ್ಯಮ ಹಾಗೂ ಬಡವರ ಕಲ್ಯಾಣ ಆಗಿದೆ ಎಂದ ಅವರು ಚಕ್ರವರ್ತಿ ಸೂಲಿಬೆಲೆ ಓರ್ವ ಸುಳ್ಳಿನ ಸರದಾರ ಎಂದು ಹೇಳಿದರು.
ಕೆಪಿಸಿಸಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಿಯೂಸ್ ಎಲ್.ರೋಡ್ರಿಗಸ್, ಕೆಪಿಸಿಸಿ ಮಾಜಿ ವಕ್ತಾರ ಅಶ್ವಿನ್ ಕುಮಾರ್ ರೈ ಹಾಗೂ ಪಕ್ಷದ ಮುಖಂಡರು, ಮುಂಚೂಣಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.