×
Ad

ಭತ್ತದ ಕೃಷಿಯನ್ನು ಕನಿಷ್ಠ ಉಪ ಕಸುಬಾಗಿ ಬೆಳೆಸಿ ಸಂರಕ್ಷಿಸಬೇಕಾಗಿದೆ: ಬಿ.ಕೆ. ದೇವ ರಾವ್

Update: 2025-07-31 20:08 IST

ಮಂಗಳೂರು: ಕೃಷಿಕರು ಭತ್ತದ ಬೆಳೆಯಿಂದ ವಿಮುಖರಾಗಿದ್ದು, ವೈವಿಧ್ಯಮಯ ಭತ್ತದ ತಳಿಗಳು ನಾಶವಾಗುವ ಭೀತಿ ಇದೆ. ಭತ್ತದ ಬೇಸಾಯ ಉಳಿವಿಗೆ ಸರಕಾರ ಪ್ರೋತ್ಸಾಹ ನೀಡಬೇಕು. ರೈತರು ಭತ್ತದ ಕೃಷಿಯನ್ನು ಕನಿಷ್ಠ ಉಪ ಕಸುಬು ಆಗಿ ಬೆಳೆಸಿ ಸಂರಕ್ಷಿಸಬೇಕಾಗಿದೆ ಎಂದು ಭತ್ತ ತಳಿ ಸಂರಕ್ಷಕ ಬಿ.ಕೆ. ದೇವ ರಾವ್ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಮಂಗಳೂರು ಪ್ರೆಸ್‌ಕ್ಲಬ್ ಆಯೋಜಿಸಿದ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಭತ್ತದ ಕೃಷಿ ಮಾಡಿದರೆ ನೀರು ಯಾವತ್ತೂ ಬತ್ತದು. ನಮ್ಮಲ್ಲಿ ಅಂತರ್ಜಲ ಕಡಿಮೆಯಾಗಲು ಭತ್ತದ ಕೃಷಿಯಿಂದ ದೂರ ಸರಿದದ್ದೇ ಕಾರಣ. ವಾಣಿಜ್ಯ ಬೆಳೆಗಳು ನಮ್ಮಲ್ಲಿ ಜಾಸ್ತಿಯಾಗಿ ಭತ್ತದ ಕೃಷಿ ಕಡಿಮೆಯಾಗಿದೆ ಎಂದರು.

ದೇಶದಲ್ಲಿ ಹಿಂದೆ 2 ಲಕ್ಷ ವಿವಿಧ ಭತ್ತದ ತಳಿಗಳಿದ್ದು, ಈಗ 25 ಸಾವಿರಕ್ಕೆ ಇಳಿಕೆಯಾಗಿದೆ. ವೈಜ್ಞಾನಿಕ ವಾಗಿ ಭತ್ತದ ತಳಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ರೈತರು ಪ್ರತಿ ವರ್ಷ ಮೊಳಕೆ ಭರಿಸಿ ಬಿತ್ತನೆ ನಡೆಸಿ ಬೆಳೆ ತೆಗೆದರೆ ಮಾತ್ರ ಅಪರೂಪದ ತಳಿಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ಭತ್ತದ ತಳಿಗಳನ್ನು ಉಳಿಸಿ ಬೆಳೆಸಲು ಸರಕಾರದ ಪ್ರೋತ್ಸಾಹ ಅಗತ್ಯ ಎಂದರು.

ಭತ್ತದ ಕೃಷಿ ನೀರು ಇಂಗಿಸುವ ಶಕ್ತಿಯೂ ಹೌದು. ಭತ್ತದ ಗದ್ದೆಗಳು ಇರುವಲ್ಲಿ ಮಾತ್ರ ಅಂತರ್ಜಲವೂ ಹೇರಳವಾಗಿರುತ್ತದೆ.

ಭತ್ತದ ಗದ್ದೆಗಳನ್ನು ಇಂದು ವಾಣಿಜ್ಯ ಬೆಳೆಗಳು ಆಕ್ರಮಿಸಿಕೊಂಡಿವೆ. ಮುಂದಿನ ಜನಾಂಗಕ್ಕೆ ಔಷಧೀಯ ಗುಣದ, ವಿಷರಹಿತ ಭತ್ತದ ತಳಿಗಳನ್ನು ವರ್ಗಾಯಿಸಬೇಕಾಗಿದೆ. ನನಗೆ ಗೌರವ ನೀಡುವುದಕ್ಕಿಂತ ಭತ್ತವನ್ನು ಗೌರವಿಸಿ, ಇದು ಮುಂದಿನ ಜನಾಂಗದ ಉಳಿವಿಗೆ ಅತ್ಯವಶ್ಯಕ ಎಂದು ಅವರು ಹೇಳಿದರು.

ಕ್ಯಾನ್ಸರ್ ನಿವಾರಕ ಅತಿಕ್ರಯಾ ಭತ್ತ: ನಮ್ಮ ನೆಲದಲ್ಲಿ ಔಷಧೀಯ ಗುಣಗಳುಳ್ಳ ಹಲವು ಭತ್ತದ ತಳಿ ಗಳನ್ನು ಬೆಳೆಯಲಾಗುತ್ತಿತ್ತು. ಈ ಪೈಕಿ ಅತಿಕ್ರಯಾ ಕೂಡಾ ಒಂದು. ಭತ್ತಕ್ಕೆ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಅತಿಕ್ರಯಾಕ್ಕೆ ಇದೆ ಎಂದು ದೇವ ರಾವ್ ಹೇಳಿದರು.

10 ವರ್ಷದ ಹಿಂದೆ ಒಬ್ಬರು ನನ್ನನ್ನು ಹುಡುಕಿಕೊಂಡು ಬಂದು ನನ್ನ ಬಳಿಯಿಂದ ಈ ಭತ್ತವನ್ನು ಕೊಂಡು ಹೋಗಿದ್ದರು.ಔಷಧದ ಗುಣ ಇರುವ ಹಲವು ಭತ್ತದ ತಳಿಗಳು ನಮ್ಮಲ್ಲಿ ಇತ್ತು. ಈಗ ಎಲ್ಲವೂ ಕಣ್ಮರೆಯಾ ಗಿದೆ. ನಾವು ಇಂತಹ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ. ನಮ್ಮ ಊರಲ್ಲಿ ಬೆಳೆಯಲಾಗುತ್ತಿದ್ದ ಭತ್ತದ ಅಕ್ಕಿಯು ಹೆಚ್ಚು ರುಚಿ, , ಪೌಷ್ಠಿಕಾಂಶವನ್ನು ಹೊಂದಿದೆ. ನನ್ನಲ್ಲಿ ಇಂದಿಗೂ 150 ಭತ್ತದ ತಳಿಗಳು ಇವೆ. ನನ್ನದು ರಾಸಾಯನಿಕರಹಿತ ಕೃಷಿ ಎಂದು ಅವರು ಹೇಳಿದರು.

ದೇವರಾವ್ ಅವರ ಪುತ್ರ ಬಿ.ಕೆ.ಪರಮೇಶ್ವರ ರಾವ್ ಮಾತನಾಡಿ ‘ ರಾಸಾಯನಿಕರಹಿತ ಭತ್ತದ ಬೇಸಾಯ ಮಾಡುತ್ತಿದ್ದೇವೆ. ಸೆಗಣಿ, ಹಟ್ಟಿ ಗೊಬ್ಬರವನ್ನು ಬಳಸಿದರೆ ಸಾಕಾಗುತ್ತದೆ. ಭತ್ತ ಶ್ರೇಷ್ಠ ಆಹಾರ ಬೆಳೆಯಾಗಿದ್ದು, ಬೆಲೆಯಲ್ಲೂ ತಾರತಮ್ಯ ಇರುವುದರಿಂದ ಭತ್ತದ ಕೃಷಿಕರಿಗೆ ಅನ್ಯಾಯವಾಗುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಚೇರ್ಮನ್ ಡಾ.ರಾಘವೇಂದ್ರ ಹೊಳ್ಳ ಮಾತನಾಡಿ, ಅಪರೂಪದ ಭತ್ತದ ತಳಿಗಳನ್ನು ಸಂಗ್ರಹಿಸಿ ಪೋಷಿಸುವ ಇಂತಹ ವ್ಯಕ್ತಿಗಳಿಗೆ ಸಮಾಜ ಬೆಂಬಲ ನೀಡಬೇಕು. ಶಿಕ್ಷಣ ಸಂಸ್ಥೆಗಳು ಕೂಡಾ ಕೃಷಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕೋಶಾಧಿಕಾರಿ ವಿಜಯ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News