ಶಿಕ್ಷಕ ವೃತ್ತಿಯು ಜವಾಬ್ದಾರಿಯುತ ಮತ್ತು ಮನೋ ಉಲ್ಲಾಸದ ವೃತ್ತಿ : ಈಶ್ವರ್
ಉಳ್ಳಾಲ: ಶಿಕ್ಷಕ ವೃತ್ತಿಯು ತುಂಬಾ ಜವಾಬ್ದಾರಿಯುತವಾದ ವೃತ್ತಿಯಾಗಿದೆ. ಒಮ್ಮೆ ಶಿಕ್ಷಕರಾದವರು ಜೀವನ ಪರ್ಯಂತ ತನ್ನ ವೃತ್ತಿಯನ್ನು ಗೌರವಿಸುತ್ತಾರೆ. ಈ ವೃತ್ತಿಯಿಂದ ನಿರ್ಗಮಿಸುವಾಗ ಪರಿತಪಿಸು ತ್ತಾರೆ. ಬೆಳಗ್ಗೆ ಶಾಲೆಗೆ ಬಂದು ವಿದ್ಯಾರ್ಥಿಗಳೊಂದಿಗೆ ತನ್ನ ಕೌಶಲತೆಯೊಂದಿಗೆ ವೃತ್ತಿಯನ್ನು ಪ್ರಾರಂಭಿ ಸಿದರೆ ಎಲ್ಲಾ ನೋವು ನಲಿವುಗಳಿಂದ ದೂರವಿದ್ದು ಮನಸ್ಸಿಗೆ ಉಲ್ಲಾಸವನ್ನು ಮತ್ತು ಸಂತಸವನ್ನು ತುಂಬುತ್ತಾರೆ. ಇಂತಹ ಪವಿತ್ರವಾದ ವೃತ್ತಿ ಜೀವನದಿಂದ ನಿರ್ಗಮಿಸುವುದು ಅಥವಾ ನಿವೃತ್ತಿ ಯಾಗುವುದು ನೋವಿನ ಸಂಗತಿಯಾಗಿದೆ ಎಂದು ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್ ಹೇಳಿದರು.
ಉಳ್ಳಾಲದ ಟಿಪ್ಪುಸುಲ್ತಾನ್ ಪ್ರೌಢಶಾಲೆಯಲ್ಲಿ 28 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಶಾಹಿನಾ ಬೇಗಂ ಅವರಿಗೆ ಗುರುವಾರ ಆಯೋಜಿಸಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂದರ್ಭ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅಹ್ಮದ್ ಶಾಲೆ ಕೈತೋಟದಲ್ಲಿ ಗಿಡ ನೆಟ್ಟರು. ಹಳೆಕೋಟೆಯ ಸೈಯದ್ ಮದನಿ ಶಾಲೆಯ ಮುಖ್ಯ ಶಿಕ್ಷಕ ಕೆಎಂಕೆ ಮಂಜನಾಡಿ ಶಾಲಾ ಸಂಸತ್ತನ್ನು ಉದ್ಘಾಟಿಸಿದರು.
ಮುಖ್ಯ ಶಿಕ್ಷಕಿ ಗೀತಾ ಶೆಟ್ಟಿ ಸ್ವಾಗತಿಸಿದರು. ಪ್ರಭಾರ ಮುಖ್ಯ ಶಿಕ್ಷಕ ಅಖಿಲ್ ಕಾರ್ಯಕ್ರಮ ನಿರೂಪಿಸಿ ದರು. ಶಾಲಾ ಸಂಸತ್ತಿನ ನಿರ್ದೇಶಕ ಬಿಎಂ ರಫೀಕ್ ತುಂಬೆ ವಂದಿಸಿದರು.