ನವೆಂಬರ್‌ನಲ್ಲಿ ವೆನ್‌ಲಾಕ್ ಒಪಿಡಿ ಬ್ಲಾಕ್ ನವೀಕರಣಕ್ಕೆ ಶಿಲಾನ್ಯಾಸ: ದಿನೇಶ್ ಗುಂಡೂರಾವ್
ಮಂಗಳೂರು, ಆ.1: ವೆನ್‌ಲಾಕ್ ಆಸ್ಪತ್ರೆಯ ಒಪಿಡಿ (ಹೊರರೋಗಿ ವಿಭಾಗ)ಯನ್ನು ಅಮೂಲಾಗ್ರ ಬದಲಾವಣೆಯೊಂದಿಗೆ ನವೀಕರಣಗೊಳಿಸಲಾಗುತ್ತಿದ್ದು, ನವೆಂಬರ್‌ನಲ್ಲಿ ಶಿಲಾನ್ಯಾಸ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯದ ಆರೋಗ್ಯ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವೆನ್‌ಲಾಕ್‌ನ ಆರ್‌ಎಪಿಸಿಸಿ ಸಭಾಂಗಣದಲ್ಲಿ ಶುಕ್ರವಾರ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೆನ್‌ಲಾಕ್‌ನ ಒಪಿಡಿ ಬ್ಲಾಕ್ ನವೀಕರಣಕ್ಕೆ ಸರಕಾರದಿಂದ ಈಗಾಗಲೇ 70 ಕೋಟಿ ರೂ. ಒದಗಿಸಲಾ ಗಿದೆ. ಆಸ್ಪತ್ರೆಯ ಅಮೂಲಾಗ್ರ ಬದಲಾವಣೆಯೊಂದಿಗೆ ಸುಸಜ್ಜಿತ ರೀತಿಯಲ್ಲಿ ನವೀಕರಣಗೊಳಿಸುವ ಅಗತ್ಯ ರೂಪುರೇಷೆಗಳನ್ನು ಒದಗಿಸುವಂತೆ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು.
ಒಪಿಡಿಯಲ್ಲಿ ಸಂಜೆವರೆಗೂ ವೈದ್ಯರಿರುವುದು ಕಡ್ಡಾಯ
ಹೊರ ರೋಗಿ ವಿಭಾಗದಲ್ಲಿ ಮಧ್ಯಾಹ್ನದ ವೇಳೆ ವೈದ್ಯರು ಇರುವುದಿಲ್ಲ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದು ರಕ್ಷಾ ಸಮಿತಿಯ ಸದಸ್ಯರು ಆಕ್ಷೇಪಿಸಿದಾಗ ಸಂಜೆಯವರೆಗೂ ಒಪಿಡಿಯಲ್ಲಿ ವೈದ್ಯರಿರಬೇಕು. ಸರಕಾರಿ ಸೇರಿದಂತೆ ಕೆಎಂಸಿಯಿಂದ ನಿಯೋಜಿಸಲ್ಪಟ್ಟ ವೈದ್ಯರೂ ಕಾರ್ಯ ನಿರ್ವಹಿಸಬೇಕು. ಸರಿಯಾಗಿ ಕೆಲಸ ನಿರ್ವಹಿಸದ ವೈದ್ಯರ ಬಗ್ಗೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಕೆಎಂಸಿ ವತಿಯಿಂದ ನಿಯೋಜಿಸಲಾದ ವೈದ್ಯರು ಕೆಲಸ ನಿರ್ವಹಿಸದ ಬಗ್ಗೆ ದೂರುಗಳಿದ್ದಲ್ಲಿ ಗಮನಕ್ಕೆ ತರುವಂತೆ ಕೆಎಂಸಿ ಡೀನ್ ಡಾ. ಉನ್ನಿಕೃಷ್ಣನ್ ಬಿ. ಹೇಳಿದರು.
ವೆನ್‌ಲಾಕ್ ಜಿಲ್ಲಾಸ್ಪತ್ರೆಯ 175ನೆ ವರ್ಷದ ಸಂಭ್ರಮಾಚರಣೆಯ ಉದ್ಘಾಟನೆ ಸೆ. 14ರಂದು ಹಾಗೂ ನ. 9ರಂದು ಸಮಾರೋಪ ಸಮಾರೋಪದೊಂದಿಗೆ ನಡೆಸುವಂತೆ ನಡೆಸಲು ಅನುದಾನ ಒದಗಿಸುವಂತೆ ಸಭೆಯಲ್ಲಿ ಸಚಿವರನ್ನು ಆಗ್ರಹಿಸಲಾಯಿತು.
ವೆನ್‌ಲಾಕ್ ಆಸ್ಪತ್ರೆಯ ಆವರಣದಲ್ಲಿ ಸಂಚರಿಸಲು ಅನುಕೂಲವಾಗಂತೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾರವರ ಅನುದಾನದಲ್ಲಿ ಇಲೆಕ್ಟ್ರಿಕ್ ಬಗ್ಗೀಸ್‌ಗೆ ಟೆಂಡರ್ ಕರೆಯಲಾಗಿದ್ದು, ಅದನ್ನು ಬಹುಪಯೋಗಿಯಾಗಿ ಉಪಯೋಗಿಸಲು ಕ್ರಮ ವಹಿಸುವಂತೆ ರಕ್ಷಾ ಸಮಿತಿ ಸದಸ್ಯರು ಸಭೆಯಲ್ಲಿ ಮನವಿ ಮಾಡಿದರು.
ಸರಕಾರಿ ಲೇಡಿಗೋಶನ್ ಆಸ್ಪತ್ರೆಯ 2024-25ನೇ ಸಾಲಿನ ಜೆಎಸ್‌ಎಸ್‌ಕೆ ಕಾರ್ಯಕ್ರಮದಡಿ ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಔಷಧಿ ಹಾಗೂ ಇತರ ವಸ್ತುಗಳ ಖರೀದಿಯ ಆಕಿ ಮೊತ್ತ 1.73 ಕೋಟಿ ರೂ.ಗಳನ್ನು ಎನ್‌ಎಚ್‌ಎಂನ ಅನುದಾನದಿಂದ ಒದಗಿಸಿಕೊಡುವಂತೆ ರಕ್ಷಾ ಸಮಿತಿ ಸಚಿವರನ್ನು ಒತ್ತಾಯಿಸಿತು.
ಸಭೆಯಲ್ಲಿ ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿ.ಪಂ. ಸಿಇಒ ನರ್ವಾಡೆ ವಿನಾಯಕ್ ಕರ್ಬೂರಿ, ಡಿಎಚ್‌ಒ ಡಾ. ಆರ್. ತಿಮ್ಮಯ್ಯ, ವೆನ್‌ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್, ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್, ಕೆಎಂಸಿ ಸಹಾಯಕ ಡೀನ್ ಡಾ. ಸುರೇಶ್ ಶೆಟ್ಟಿ, ರಕ್ಷಾ ಸಮಿತಿಯ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಸರ್ಜಿಕಲ್ ಬ್ಲಾಕ್‌ನ ಬೆಡ್ ದರದಲ್ಲಿ ಕಡಿತ
ಹೊಸ ಸರ್ಜಿಕಲ್ ಬ್ಲಾಕ್‌ನ 4ನೆ ಅಂತಸ್ತಿನಲ್ಲಿ ಕಾರ್ಯಾರಂಭಗೊಳಿಸಲಾಗಿರುವ ಪೋಸ್ಟ್ ಒಪಿ ಐಸಿಯು ನಲ್ಲಿರುವ ವೆಂಟಿಲೇಟರ್ ಬೆಡ್‌ಗಳಿಗೆ ದಿನಕ್ಕೆ ತಲಾ 550 ರೂ. ಹಾಗೂ ಮತ್ತು ನಾನ್ ವೆಂಟಿಲೇಟರ್ ಬೆಡ್‌ಗಳಿಗೆ ತಲಾ 300 ರೂ. ದರ ನಿಗದಿಪಡಿಸಲಾಗಿದ್ದು, ದರದಲ್ಲಿ ಕಡಿತ ಮಾಡುವಂತೆ ರಕ್ಷಾ ಸಮಿತಿ ಸದಸ್ಯರು ಆಗ್ರಹಿಸಿದರು. ಸಚಿವ ದಿನೇಶ್ ಗುಂಡೂರಾವ್‌ರವರು ಸಮಿತಿ ಸದಸ್ಯರ ಆಗ್ರಹಕ್ಕೆ ಮನ್ನಣೆ ನೀಡಿ ಸಭೆಯಲ್ಲೇ ವೆಂಟಿಲೇಟರ್ ಬೆಡ್‌ಗೆ ದಿನಕ್ಕೆ ತಲಾ 450 ರೂ. ನಾನ್ ವೆಂಟಿಲೇಟರ್ ಬೆಡ್‌ಗೆ 250 ರೂ.ಗಳಂತೆ ನಿಗದಿಪಡಿಸುಂತೆ ಆದೇಶಿಸಿದರು.