×
Ad

ಕುಲಶೇಖರ ಮೆಸ್ಕಾಂ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆ

Update: 2025-08-04 20:45 IST

ಮಂಗಳೂರು: ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು ಗ್ರಾಹಕರಿಂದಲೇ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆಗಿಳಿದಿರುವ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಮರೋಳಿ-ಜೋಡುಕಟ್ಟೆ ಬಳಿಯಿರುವ ಮೆಸ್ಕಾಂ ಕಚೇರಿ (ಕುಲಶೇಖರ ಉಪವಿಭಾಗ)ಯ ಮುಂದೆ ಸೋಮವಾರ ಪ್ರತಿಭಟನೆ ನಡೆಯಿತು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ನೌಕರರ ಪಿಂಚಣಿ ಹಾಗೂ ಗ್ರಾಚ್ಯುಟಿಗೆ ವಿರೋಧವಿಲ್ಲ. ಆದರೆ ಅದಕ್ಕೆ ಗ್ರಾಹಕರಿಂದ ವಸೂಲಿ ಮಾಡುವುದು ಸರಿಯಲ್ಲ. ಗ್ರಾಚ್ಯುಟಿ ನೀಡುವ ಹೊಣೆ ರಾಜ್ಯ ಸರಕಾರದಾ ಗಿದೆ. ಸರಕಾರ ತನ್ನ ಮೇಲಿನ ಹೊಣೆಯನ್ನು ಗ್ರಾಹಕರ ಮೇಲೆ ಹೊರಿಸಿದ್ದರಿಂದ ಸಹಜವಾಗಿ ಜನರು ಆಕ್ರೋಶಗೊಂಡಿದ್ದಾರೆ. ಯೂನಿಟಿಗೆ 36 ಪೈಸೆ ಹೆಚ್ಚಳದಂತೆ ಪ್ರತಿ ಮನೆಯಿಂದ ನೂರಾರು, ಸಾವಿರಾರು ರೂಪಾಯಿ ವಸೂಲಿ ಮಾಡಿ ಕೋಟ್ಯಂತರ ರೂಪಾಯಿಗಳನ್ನು ದೋಚುವ ಹುನ್ನಾರ ನಡೆದಿದೆ. ಈಗಾಗಲೇ ವಿದ್ಯುತ್ ದರ ಹೆಚ್ಚಳ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಲಾಗಿದೆ. ಎರಡು ಸಾವಿರಕ್ಕೆ ಸಿಗುತ್ತಿದ್ದ ಸಾರ್ಟ್ ಮೀಟರನ್ನು ಹತ್ತು ಸಾವಿರಕ್ಕೆ ಏರಿಕೆ ಮಾಡಿ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದೆ. ಆದರೂ ಈ ಸರಕಾರ ಬುದ್ಧಿ ಕಲಿತಿಲ್ಲ ಎಂದರು.

ಪ್ರತಿಭಟನೆಯಲ್ಲಿ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪೂರ್ಣಿಮಾ, ವಸಂತ ಜೆ. ಪೂಜಾರಿ, ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ಮೋನಪ್ಪಭಂಡಾರಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News