×
Ad

ಧರ್ಮಸ್ಥಳ ಪ್ರಕರಣದ ದಿಕ್ಕು ತಪ್ಪಿಸಲು ಎನ್‌ಐಎ ದಾಳಿಯ ಷಡ್ಯಂತರ: ಎಸ್‌ಡಿಪಿಐ ಆರೋಪ

Update: 2025-08-04 21:09 IST

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ರೌಡಿಶೀಟರ್ ಸುಹಾಶ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಡಿಪಿಐ ನಾಯಕರ, ಕಾರ್ಯಕರ್ತರ ಮನೆಯ ಮೇಲೆ ಎನ್‌ಐಎ ಮೂಲಕ ದಾಳಿ ನಡೆಸುವ ವ್ಯವಸ್ಥಿತ ಷಡ್ಯಂತ್ರವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಾಡುತ್ತಿದೆ ಎಂದು ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ. ಆರೋಪ ಮಾಡಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕರಣದ ವಿಚಾರಣೆಗೆ ಎಸ್‌ಡಿಪಿಐ ಯಾವ ರೀತಿಯಲ್ಲೂ ಅಡ್ಡಿಪಡಿಸುತ್ತಿಲ್ಲ. ಮೊನ್ನೆ ನಡೆದ ದಾಳಿಯ ಸಂದರ್ಭ ಕೂಡ ಎಸ್‌ಡಿಪಿಐ ಸಂಪೂರ್ಣ ಸಹಕಾರ ನೀಡಿದೆ. ಪಕ್ಷವು ಎನ್‌ಐಎ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಪ್ರಶ್ನಿಸುವುದಿಲ್ಲ. ಆದರೆ ಕೇಂದ್ರ ಸರಕಾರದ ಈ ವ್ಯವಸ್ಥಿತ ಷಡ್ಯಂತ್ರವನ್ನು ಬಯಲಿಗೆಳೆಯಲಿದೆ ಎಂದರು.

ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಸಂಘಪರಿವಾರ ಬಜ್ಪೆ ಚಲೋ ಆಯೋಜಿಸಿದಾಗ ಅದನ್ನು ವಿರೋಧಿಸಿ ಮಾತನಾಡಿರುವ ಪಕ್ಷದ ಮುಖಂಡರನ್ನು ಗುರಿಪಡಿಸಿ ಎನ್‌ಐಎ ದಾಳಿ ನಡೆದಿದೆ. ಕೇಂದ್ರ ಸರಕಾರ, ಬಿಜೆಪಿ, ಹಿಂದುತ್ವ ಸಂಘಟನೆಗಳು ಎಸ್‌ಡಿಪಿಐ ಕಾರ್ಯಕರ್ತರ ವೃಥಾ ಮೇಲೆ ಆರೋಪ ಮಾಡಿ ಹಿಂಸಿಸಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ದೇಶದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿದರೆ ಕಾನೂನು ಹೋರಾಟ ಮಾಡಲಿದೆ ಎಂದು ಅಬ್ದುಲ್ ಜಲೀಲ್ ಕೆ. ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಂಗಳೂರು ನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ಅಶ್ರಫ್ ಅಡ್ಡೂರು, ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇರ್ಷಾದ್ ಹಳೆಯಂಗಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News