ಡಿ.24ರಂದು ʼಫೂಲ್ ಬಸನ್ ಬಾಯಿ ಯಾದವ್ʼ ಗೆ ಮೂಲತ್ವ ಪ್ರಶಸ್ತಿ
ಮಂಗಳೂರು, ಡಿ.22: ಮೂಲತ್ವ ‘ನಾನೇ ನೀನು ನೀನೇ ನಾನು ’ ಎಂಬ ತತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ 9ನೆಯ ವರ್ಷದ ‘ಮೂಲತ್ವ ವಿಶ್ವಪ್ರಶಸ್ತಿ’ಯನ್ನು ಈ ವರ್ಷ ಸಮಾಜಸೇವಕಿ ಛತ್ತೀಸ್ ಘಡ್ ನ ಪದ್ಮಶ್ರೀ ಫೂಲ್ ಬಸನ್ ಬಾಯಿ ಅವರಿಗೆ ಪ್ರದಾನಿಸಲಾಗುತ್ತಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಪ್ರಕಾಶ್ ಮೂಲತ್ವ, ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಡಿ.24ರ ಪೂರ್ವಾಹ್ನ 10ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಮಾಜಸೇವಕ ಈಶ್ವರ್ ಮಲ್ಪೆ, ಗೋವಿಂದದಾಸ ಕಾಲೇಜಿನ ಎನ್ ಎಸ್ಎಸ್ ಘಟಕದ ಕಾರ್ಯದರ್ಶಿ ಹಿತಾ ಉಮೇಶ್ ಭಾಗವಹಿಸುವರು. ಮೂಲತ್ವ ವಿಶ್ವ ಪ್ರಶಸ್ತಿಯು 100,001ರೂ. ನಗದು, ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಳ್ಳಲಿದೆ ಎಂದು ತಿಳಿಸಿದರು.
ಮೂಲತ್ವ ಸಂಸ್ಥೆಯು ಪ್ರತಿ ವರ್ಷ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಮೂಲತ್ವ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. ಈ ವರ್ಷ ಆಯ್ಕೆಯಾಗಿರುವ ಫೂಲ್ ಬಸನ್ ಯಾದವ್ ಅವರು ದೇಶ ಗುರುತಿಸಿದ ಪ್ರಸಿದ್ಧ ಸಮಾಜಸೇವಕಿ. ʼಬಮ್ಲೇಶ್ವರಿ ಜನ್ ಹಿತ್ ಕರೇʼ ಸಮಿತಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಹಲವಾರು ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವವರು. 8 ಲಕ್ಷಕ್ಕೂಅಧಿಕ ಮಹಿಳಾ ಸದಸ್ಯರನ್ನು ಒಗ್ಗೂಡಿಸಿ ಕಳೆದ ಸುಮಾರು 25 ವರ್ಷಗಳಿಂದ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಸಾಧನೆಯನ್ನು ಗುರುತಿಸಿ ಈ ವರ್ಷದ ವಿಶ್ವ ಮೂಲತ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಾಶ್ ಮೂಲತ್ವ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್ ಶೈನಿ, ಲಕ್ಷ್ಮೀಶ ಪಿ ಕೋಟ್ಯಾನ್, ಮೂಲತ್ವ ವಿಶ್ವ ಪ್ರಶಸ್ತಿಯ ಸಂಚಾಲಕಿ ಅಕ್ಷತಾ ಕದ್ರಿ, ಸದಸ್ಯ ಪ್ರವೀಣ್ ಉಡುಪ ಉಪಸ್ಥಿತರಿದ್ದರು.