ಸಾಲದ ಆಮಿಷ ಒಡ್ಡಿ ಆನ್‌ಲೈನ್ ವಂಚನೆ: ಪ್ರಕರಣ ದಾಖಲು
ಮಂಗಳೂರು: ಸಾಲದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ಮೂಲಕ ವಂಚಿಸಿದ ಬಗ್ಗೆ ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟಂಬರ್‌ನಲ್ಲಿ ತನಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ ಬೆಂಗಳೂರಿನ ಜಯಪ್ರಕಾಶ್ ಫೈನಾನ್ಸ್ ಎಂಬುದಾಗಿ ಪರಿಚಯಿಸಿಕೊಂಡ. ಬಳಿಕ ತನಗೆ 50,000 ರೂ. ವೈಯಕ್ತಿಕ ಸಾಲವನ್ನು ಶೀಘ್ರವಾಗಿ ನೀಡುವುದಾಗಿ ಕರೆ ಮಾಡಿ ತಿಳಿಸಿದ್ದ. ತಾನು ಆ ಬಗ್ಗೆ ವಿಚಾರಿಸಿದಾಗ ಕೃತಿಕಾ ಎಂಬಾಕೆ ಮಾತನಾಡಿ ಸಾಲ ಮಂಜೂರು ಮಾಡುವುದಾಗಿ ತಿಳಿಸಿದ್ದಳು. ಬಳಿಕ ಆ ಕಂಪನಿಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ಶ್ರೀವಾತ್ಸವ್ ಎಂಬಾತ ಬೇರೆ ಬೇರೆ ರೀತಿಯ ಶುಲ್ಕಗಳನ್ನು ಪಾವತಿಸುವಂತೆ ತಿಳಿಸಿದ್ದಾನೆ. ಅದನ್ನು ನಂಬಿದ ತಾನು ಸೆ.8ರಿಂದ 23ರವರೆಗೆ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬೇರೆ ಬೇರೆ ಗೂಗಲ್ ಪೇ ನಂಬರ್‌ಗಳಿಗೆ ಯುಪಿಐ ಮುಖಾಂತರ ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 2,15,000 ರೂ.ಗಳನ್ನು ವರ್ಗಾಯಿಸಿದ್ದೆ. ನಂತರ ತಾನು ಸಾಲದ ಹಣ ಮಂಜೂರು ಮಾಡುವಂತೆ ಕೇಳಿದಾಗ ಮತ್ತಷ್ಟು ಶುಲ್ಕಗಳನ್ನು ಪಾವತಿಸುವಂತೆ ಸೂಚಿಸಿದ್ದಾರೆ. ಆದರೆ ಆ ವ್ಯಕ್ತಿಗಳು ಯಾವುದೇ ಸಾಲವನ್ನು ನೀಡದೆ ಮತ್ತು ತಾನು ಪಾವತಿಸಿದ ಹಣವನ್ನು ವಾಪಾಸ್ ನೀಡದೆ ಆನ್‌ಲೈನ್ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.