ಜ್ಞಾನವೇ ನಮ್ಮ ಯಶಸ್ಸಿನ ಶಕ್ತಿಯಾಗಬೇಕು: ಡಾ.ಉಮ್ಮರ್ ಬೀಜದಕಟ್ಟೆ
ಕೊಣಾಜೆ: ಇಂದಿನ ಆಧುನಿಕ,ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಅನೇಕ ಸವಾಲುಗಳು ನಮ್ಮ ಮುಂದಿವೆ. ಶಿಕ್ಷಣ, ಕಠಿಣ ಪರಿಶ್ರಮ, ಉತ್ತಮ ವ್ಯಕ್ತಿತ್ಚ ಹಾಗೂ ಜ್ಞಾನವೇ ನಮ್ಮ ಶಕ್ತಿಯಾಗಿದ್ದು, ಅದುವೇ ಹಂತ ಹಂತವಾಗಿ ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ಬೆಂಗಳೂರಿನ ಮಾನವ ಸಂಪನ್ಮೂಲ ಕೇಂದ್ರದ ತರಬೇತಿ ಮತ್ತು ಆಡಳಿತ ವಿಭಾಗದ ಉಪಾಧ್ಯಕ್ಷರಾದ ಡಾ.ಉಮ್ಮರ್ ಬೀಜದ ಕಟ್ಟೆ ಅವರು ಹೇಳಿದರು.
ಅವರು ಬುಧವಾರ ಕೊಣಾಜೆ ನಡುಪದವಿನ ಪಿ.ಎ.ಎಜ್ಯುಕೇಶನ್ ಟ್ರಸ್ಟ್ ನ ಪಿ.ಎ.ಪ್ರಥಮ ದರ್ಜೆ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಾಧನೆಯ ಹಾದಿಯಲ್ಲಿ ಎಡವುದು ಸಹಜ. ಆದರೆ ಅದುವೆ ಹಾದಿ ಯಶಸ್ಸಿನ ಮೆಟ್ಟಿಲೂ ಆಗಿದೆ. ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು ಜೊತೆಗೆ ಪೋಷಕರ ಕನಸನ್ನು ನನಸಾಗಿಸಬೇಕು. ಕಲಿಕೆ ಎಂಬುದು ನಿರಂತರವಾದ ಪ್ರಕ್ರಿಯೆಯಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪಿ.ಎ ಎಜ್ಯುಕೇಶನಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗ ವೇಗದಿಂದ ಮುನ್ನಡೆಯುತ್ತಿದೆ. ಪ್ರತೀ ಕ್ಷೇತ್ರದಲ್ಲಿ ಸ್ಪರ್ಧೆಗಳು ಹೆಚ್ಚಾಗುತ್ತಿವೆ. ಶಿಕ್ಷಣ, ಕೌಶಲ, ಮಾನವೀಯ ಮೌಲ್ಯ ಗಳು, ಶಿಸ್ತು ಈ ಗುಣಗಳು ನಮ್ಮನ್ನು ಉತ್ತಮತೆಯೆಡೆಗೆ ಕೊಂಡೊಯುತ್ತದೆ ಎಂದರು. ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಪಿ.ಎ.ಇಬ್ರಾಹಿಂ ಹಾಜಿಯವರು ಹಾಕಿದ ಶಿಕ್ಷಣದ ಬೀಜ ಮೊಳಕೆಯೊಡೆದು ಇಂದು ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ಕೊಡುಗೆ ನೀಡುತ್ತಿದೆ ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸರ್ಫ್ರಾಝ್ ಹಾಸಿಂ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಬೋಧಿಸಿದರು.
ಕಾರ್ಯಕ್ರಮದಲ್ಲಿ ಪಿ.ಎ.ಎಜ್ಯುಕೇಶನ್ ಟ್ರಸ್ಟ ನ ಹಣಕಾಸು ನಿರ್ದೇಶಕರಾದ ಕೆ.ಅಹಮ್ಮದ್ ಕುಟ್ಟಿ, ಪಿಎ ಕಾಲೇಜಿನ ಎಜಿಎಂ ಸರ್ಫುದ್ದೀನ್, ಡೀನ್ ಸಯ್ಯದ್ ಅಮೀನ್ ಅಹ್ಮದ್ , ಆರೀಸ್ ಟಿ.ಡಿ, ಉಪ ಪ್ರಾಂಶುಪಾಲ ಡಾ.ಜಿ.ಹರಿಕೃಷ್ಣನ್, ಫುಡ್ ಸೈಯನ್ಸ್ ವಿಭಾಗದ ಮುಖ್ಯಸ್ಥರಾದ ಡೆಲ್ಸಿ ಡಿಸೋಜ, ಮಾನವಿಕ ವಿಭಾಗದ ಮುಖ್ಯಸ್ಥರಾದ ನೂರ್ ಜಹಾನ್ ಬೇಗಂ ಮೊದಲಾದವರು ಉಪಸ್ಥಿತರಿದ್ದರು.
ಐಕ್ಯೂಎಸಿ ಸಂಯೋಜಕರಾದ ವಾಣಿಶ್ರೀ ವೈ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ದೀಪ್ತಿ ಉದ್ಯಾವರ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಮುನಿರಾ ಹಾಗೂ ಲವಿನಾ ಡಿಸೋಜ ಅವರು ಕಾರ್ಯಕ್ರಮ ನಿರೂಪಿಸಿದರು.