×
Ad

ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದ ಜನತೆ ನೆಮ್ಮದಿಯಲ್ಲಿದ್ದಾರೆ : ಶಾಸಕ ಅಶೋಕ್ ಕುಮಾರ್ ರೈ

Update: 2025-11-10 19:56 IST

ಉಪ್ಪಿನಂಗಡಿ: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದ ಜನತೆ ನೆಮ್ಮದಿಯಲ್ಲಿದ್ದಾರೆ ಇದಕ್ಕೆ ಕಾರಣ ಸರಕಾರದ ಗ್ಯಾರಂಟಿ ಯೋಜನೆಯಾಗಿದ್ದು, ಈ ವಿಚಾರವನ್ನು ಕಾರ್ಯಕರ್ತರು ಪ್ರತೀ ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು.

ಉಪ್ಪಿನಂಗಡಿ ರೋಟರಿ ಸಭಾಭವನದಲ್ಲಿ ನಡೆದ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಣ್ಣ ಕೆಲಸ ಮಾಡಿ ದೊಡ್ಡ ಪ್ರಚಾರ ಪಡೆಯುವ ಬಿಜೆಪಿಯವರು ಯಾವುದೇ ಅಭಿವೃದ್ದಿ ಕೆಲಸವನ್ನು ಮಾಡದೇ ಇದ್ದರೂ, ಜನರ ಭಾವನೆಯ ಮೇಲೆ ಚೆಲ್ಲಾಟವಾಡುವ ಮೂಲಕ ವೋಟು ಗಿಟ್ಟಿಸುವ ಗಿಮಿಕ್ ಮಾಡುತ್ತಿರುತ್ತಾರೆ. ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಹತ್ತು ವರ್ಷದಲ್ಲಿ ಜನರ ಮೇಲೆ ಜಿಎಸ್ಟಿ ಬರೆ ಎಳೆದಿದ್ದರು. ಜಿಎಸ್ಟಿ ಹೊರೆಯನ್ನು ದೇಶದ ಪ್ರತಿಯೊಂದು ಪ್ರಜೆಯ ತಲೆಗೂ ಹಾಕಿದ್ದರು. ಹತ್ತು ವರ್ಷದ ಬಳಿಕ ನಾಲ್ಕು ವಸ್ತುಗಳಿಗೆ ಜಿಎಸ್ಟಿ ತೆರಿಗೆ ಇಳಿಸಿದ್ದು ಅದನ್ನೇ ದೀಪಾವಳಿ ಕೊಡುಗೆ ಎಂದು ಹೇಳಿ ಜನರನ್ನು ಮಂಗ ಮಾಡುವ ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಬಿಜೆಪಿ ಸರಕಾರದ ಒಂದೇ ಒಂದು ಜನಪರ ಕೆಲಸವನ್ನು ತೋರಿಸಿ ಎಂದು ಸವಾಲು ಹಾಕಿದ ಶಾಸಕ ಅಶೋಕ್ ಕುಮಾರ್ ರೈ, ವರ್ಷಕ್ಕೆ ಎರಡು ಸಾವಿರ ಕೊಡುವ ಕಿಸಾನ್ ಸಮ್ಮಾನ್ ಯೋಜನೆಯನ್ನೇ ದೊಡ್ಡ ವಿಚಾರವಾಗಿ ಪ್ರಚಾರ ಮಾಡುವ ಬಿಜೆಪಿಯವರಿಗೆ ಸಿದ್ದರಾಮಯ್ಯ ಸರಕಾರ ಕೊಡುವ ಗ್ಯಾರಂಟಿ ಯೋಜನೆಯ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ಅವರು ಹೇಳಿದರು.

ಪುತ್ತೂರು ಶಾಸಕ ಅಶೋಕ್ ರೈ ಅವರ ಶಕ್ತಿ ಹೇಗಿದೆ ಎಂಬುದನ್ನು ಪುತ್ತೂರಿಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಮುಂದೆ ಹೇಳಿ ಹೋಗಿದ್ದಾರೆ. ಯಾವ ಶಾಸಕರೂ ಪುತ್ತೂರಿನಲ್ಲಿ ಮಾಡದ ಅಭಿವೃದ್ದಿ ಕೆಲಸವನ್ನು ಅಶೋಕ್ ರೈ ಮಾಡಿದ್ದಾರೆ. ಇಲ್ಲಿನವರೇ ಮುಖ್ಯಮಂತ್ರಿಗಳಾಗಿದ್ದರು, ಸಚಿವರಾಗಿದ್ದರು, ಸಂಸದರಾಗಿದ್ದರೂ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಲು ಸಾಧ್ಯವಾಗಿಲ್ಲ. ಯಾವುದೇ ಅಭಿವೃದ್ದಿ ಕೆಲಸ ಮಾಡಬೇಕಾದರೂ ಇಚ್ಚಾಶಕ್ತಿ ಬೇಕಾಗುತ್ತದೆ. ಇದು ಅಶೋಕ್ ರೈ ಅವರಲ್ಲಿದೆ. ಇದೇ ಕಾರಣಕ್ಕೆ ಪುತ್ತೂರಿಗೆ ಕೋಟಿಗಟ್ಟಲೆ ಅನುದಾನ ಹರಿದು ಬರುತ್ತಿದೆ. ಬಡವರ ಕೆಲಸಗಳು ಆಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮುಹಮ್ಮದ್ ಹೇಳಿದರು.

ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು ಟಿ ತೌಸೀಫ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರೈ ಮಠಂತಬೆಟ್ಟು, ಕೆಪಿಸಿಸಿ ಸಂಯೋಜಕ ಚಂದ್ರಹಾಸ ಶೆಟ್ಟಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಉಪ್ಪಿನಂಗಡಿ ಬ್ಲಾಕ್ ಉಸ್ತುವಾರಿ ವಿಕ್ರಂ ಶೆಟ್ಟಿ, ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ವಲಯ ಅಧ್ಯಕ್ಷರುಗಳಾದ ಅನಿ ಮಿನೇಜಸ್, ಪ್ರವೀಣ್ ಶೆಟ್ಟಿ ಕೆದಿಲ, ಮೋನಪ್ಪ ಗೌಡ ಕೋಡಿಂಬಾಡಿ, ಅಬ್ದುಲ್ಲಾ ಪೆರ್ನೆ, ಆದಂ ಕೊಪ್ಪಳ, ಕೆದಿಲ ಗ್ರಾ.ಪಂ ಅಧ್ಯಕ್ಷ ಹರೀಶ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯ ಸೋಮನಾಥ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಸ್ಕರ್ ಅಲಿ, ಪ್ರಮುಖರಾದ ಫಾರೂಕ್ ಬಾಯಬ್ಬೆ, ಜಗನ್ನಾಥ ರೈ ನಡುಮನೆ, ಡಾ. ರಮ್ಯಾರಾಜಾರಾಂ, ಸತೀಶ್ ಪಟಾರ್ತಿ, ಗೀತಾ ದಾಸರಮೂಲೆ, ಅಬ್ದುಲ್ ರಹಿಮಾನ್ ಯುನಿಕ್, ಸೇಸಪ್ಪ ನೆಕ್ಕಿಲು ಶೌಕತ್ ಕೆಮ್ಮಾರ ಮತ್ತಿತರರು ಉಪಸ್ಥಿತರಿದ್ದರು.

ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ನಝೀರ್ ಮಠ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಬ್ಲಾಕ್ ಗೆ ನೇಮಕವಾದ ವಿವಿಧ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ಶಾಸಕರು ವಿತರಿಸಿದರು. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಪ್ಪಿನಂಗಡಿ ಉಬಾರ್ ಸ್ಪೋರ್ಟಿಂಗ್ ಕ್ಲಬ್‍ನ ಅಧ್ಯಕ್ಷ ಶಬೀರ್ ಕೆಂಪಿಯವರನ್ನು ಈ ಸಂದರ್ಭ ಶಾಸಕರು ಸನ್ಮಾನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News