×
Ad

ಯೋಜನೆ ನಮ್ಮದು, ಪ್ರಚಾರ ಪಡೆಯುವುದು ಕೇಂದ್ರ ಸರಕಾರ: ಸಚಿವ ಪ್ರಿಯಾಂಕ್ ಖರ್ಗೆ

Update: 2023-11-15 21:28 IST

ಮಂಗಳೂರು, ನ.15: ಜಲಜೀವನ್ ಮಿಷನ್, ಆಯುಷ್ಮಾನ್ ಭಾರತ್, ಅನ್ನಭಾಗ್ಯ ಯೋಜನೆಗಳಲ್ಲಿ ಹೆಚ್ಚಿನ ಪಾಲು ರಾಜ್ಯ ಸರಕಾರದ್ದು. ಆದರೆ ಪ್ರಚಾರ ಪಡೆಯುವುದು ಮಾತ್ರ ಕೇಂದ್ರ ಸರಕಾರ. ಪ್ರಧಾನಿ ನರೇಂದ್ರ ಮೋದಿ ಅವರು ಶೇ. ನೂರರಷ್ಟು ಕೇಂದ್ರದ ಯೋಜನೆ ಎಂದು ಪುಕ್ಕಟೆ ಪ್ರಚಾರ ಪಡೆಯುವ ವೈಖರಿ. ಈ ಬಗ್ಗೆ ಕಾಂಗ್ರೆಸ್ ಪ್ರತಿನಿಧಿಗಳು ವಾಸ್ತವವನ್ನು ಜನರಿಗೆ ತಿಳಿಸಬೇಕು ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಕರೆ ನೀಡಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್, ದ.ಕ. ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ವತಿಯಿಂದ ಮಂಗಳೂರು ಪುರಭವನದಲ್ಲಿ ಬುಧವಾರ ಆಯೋಜಿಸಲಾದ ಪಂಚಾಯತ್‌ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸಿ

ನಮ್ಮದು ಆಳುವ ಸರಕಾರವಲ್ಲ. ಜನರ ಮಾತು ಆಲಿಸುವ ಸರಕಾರ. ಅದಕ್ಕಾಗಿ ಜನರ ಬಳಿ ಬಂದು ಅವರ ಸಮಸ್ಯೆ, ಸಲಹೆಗನ್ನು ಪಡೆಯಲಾಗುತ್ತದೆ. ಪಕ್ಷದ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳಿಂದ ಸರಕಾರದ ಅಭಿವೃದ್ಧಿ ಯೋಜನೆ ಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು. ಇಲ್ಲವಾದರೆ ಈಗಾಗಲೇ ಶೇ. 60ರಷ್ಟು ರಾಜ್ಯ ಸರಕಾರದ ಪಾಲು ಹೊಂದಿರುವ ಜಲಜೀವನ್ ಮಿಷನ್‌ಗೆ ಪ್ರಧಾನಿ ಮೋದಿಯವರ ಯೋಜನೆ ಎಂಬಂತೆ ಪ್ರಚಾರ ಗಿಟ್ಟಿಸುತ್ತಿದ್ದಾರೆ. ನಮ್ಮಲ್ಲಿ ಆಚಾರ, ವಿಚಾರ ಎಲ್ಲಾ ಇದೆ. ಆದರೆ ಪ್ರಚಾರ ಇಲ್ಲ. ಅದನ್ನು ಪ್ರಧಾನಿ ಮೋದಿ ಅವರಿಂದ ಪಡೆಯಬೇಕಾಗಿದೆ ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ಇಲ್ಲದಿದ್ದರೆ ನಾವೇ ಬಿಜೆಪಿಯನ್ನು ಬೆಳೆಸಿದಂತೆ ಎಂದರು.

ಉದ್ಯೋಗ ಖಾತರಿ ಯೋಜನೆಯಡಿ ವೇತನ ಸುಮಾರು 600 ಕೋಟಿ ರೂ.ಗಳಿಗೂ ಅಧಿಕ ಕೇಂದ್ರದಿಂದ ಬಾಕಿ ಇದೆ. ಯೋಜನೆಯಡಿ ರಾಜ್ಯಕ್ಕೆ ನಿಗದಿಯಾಗಿದ್ದ 13 ಕೋಟಿ ಮಾನವ ದಿನಗಳಲ್ಲಿ 11 ಕೋಟಿ ಈಗಾಗಲೇ ಮುಗಿಸಲಾಗಿದೆ. ಇನ್ನೂ ಐದು ತಿಂಗಳು ಬಾಕಿ ಇದೆ. ಹಾಗಾಗಿ ಮೂರು ಬಾರಿ ಕೇಂದ್ರಕ್ಕೆ ಮನವಿ ಮಾಡಿ ಅದನ್ನು 18 ಕೋಟಿಗೆ ಏರಿಕೆ ಮಾಡುವಂತೆ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು.

ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಪಂಚತಂತ್ರ-2 ರೂಪಿಸಲಾಗಿದ್ದು, ಪ್ರಾಯೋಗಿಕವಾಗಿ ಜಾರಿಯಲ್ಲಿದೆ. ಗ್ರಾ.ಪಂ ಸಭೆಯನ್ನು ಆನ್‌ಲೈನ್ ಮೂಲಕವೇ ಇದರಲ್ಲಿ ಮಾಡಿ ಅದರ ವರದಿ ಸಲ್ಲಿಸಿದರೆ ಅನುದಾನ ಕೂಡ ಬೇಗನೆ ಲಭಿಸಲು ಅನುಕೂಲವಿದೆ. ಪಿಡಿಒಗಳ ಹಾಜರಾತಿ ಕೂಡ ಬಯೋಮೆಟ್ರಿಕ್ ಆಗಿರಲಿದೆ. ಪುಸ್ತಕ ಓದುವ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ಕಡೆಯಲ್ಲಿಯೂ ಸುಸಜ್ಜಿತ ಗ್ರಂಥಾಲಯವನ್ನು ಹೊಂದಿದ ಅರಿವು ಕೇಂದ್ರ ಆರಂಭಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪಂಚಾಯತ್‌ಗೆ ಸಂಬಂಧಿಸಿ ಜನರ ಸಮಸ್ಯೆ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಪಂಚಮಿತ್ರ ಎಂಬ ಕಾಲ್ ಸೆಂಟರ್ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ. ಪಂಚಾಯತ್‌ಗಳು ಸರಕಾರದ ಅನುದಾನದ ಜತೆಗೆ ಸಂಪನ್ಮೂಲ ಸೃಷ್ಟಿಗೆ ಆದ್ಯತೆ ನೀಡಬೇಕಿದೆ. ಪಂಚಾಯತ್‌ಗಳಲ್ಲಿ ತ್ಯಾಜ್ಯ ಸಂಗ್ರಹ-ಸಂಸ್ಕರಣೆಯನ್ನು ವಾಣಿಜ್ಯ ಮಾದರಿಯಲ್ಲಿ ರೂಪಿಸಿ ಸ್ವಸಹಾಯ ಸಂಘದ ಸಹಕಾರದೊಂದಿಗೆ ಪಂಚಾಯತ್-ಸ್ವಸಹಾಯ ಸಂಘಕ್ಕೆ ಲಾಭವಾಗುವ ವಿಶೇಷ ಪರಿಕಲ್ಪನೆ ಶೀಘ್ರ ಜಾರಿಯಾಗಲಿದೆ ಎಂದರು.

ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅವರು ಪಂಚಾಯತ್‌ರಾಜ್ ಅಧಿನಿಯಮದ 30 ವರ್ಷದ ಸಂಭ್ರಮದ ಬಗ್ಗೆ ಮಾತನಾಡಿದರು. ಆಡಳಿತ ವಿಕೇಂದ್ರಿಕರಣ ಮಾಡುವ ಮೂಲಕ ಕಾಂಗ್ರೆಸ್ ಹೊಸ ನಾಯಕತ್ವ ಬೆಳೆಸುವಲ್ಲಿ ಮುಂಚೂಣಿ ಯಲ್ಲಿ ನಿಂತಿದೆ. ಆದರೆ ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಯನ್ನೇ ನೆಪವೊಡ್ಡಿ ಮುಂದೂಡಿದೆ. ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ 5 ವರ್ಷ ಇರಬೇಕು ಹಾಗೂ ಮೀಸಲಾತಿ 2 ಬಾರಿಗೆ ಒಂದೇ ಇರಲಿ ಎಂದರು.

ಸಚಿವರು ರಾಜಕೀಯ ಬದಿಗೊತ್ತಿ ಅಭಿವೃದ್ಧಿ ಕಾರ್ಯ ಹಾಗೂ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಪ್ರಸ್ತಾವಿಸಿದರು. ಕೇರಳದಲ್ಲಿ ಇರುವಂತೆ ನಮ್ಮಲ್ಲಿಯೂ ಪಕ್ಷದ ಚಿಹ್ನೆಯಲ್ಲಿ ಗ್ರಾ.ಪಂ ಚುನಾವಣೆಯನ್ನೂ ನಡೆಸಬೇಕಿದೆ. ಹಲವು ಗ್ರಾ.ಸಭೆಯ ಬದಲು 1 ಸಭೆ ಮಾಡಿ ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು ಬರುವಂತೆ ಮಾಡಬೇಕು. 25 ಎಕರೆ ಜಾಗವನ್ನು ಗ್ರಾ.ಪಂಗೆ ಮೀಸಲಿಡಬೇಕು. ವಸತಿ ಯೋಜನೆಗೆ 5 ಲಕ್ಷ ರೂ. ಸಹಾಯಧನ ನೀಡಬೇಕು. ಪಿಡಿಒಗಳನ್ನು ಆಯಾ ಜಿಲ್ಲೆಯವರನ್ನೇ ನಿಯೋಜಿಸಬೇಕು. 3ರಿಂದ 5 ವರ್ಷ ಮಾತ್ರ ಒಂದೇ ಸ್ಥಳದಲ್ಲಿ ಇವರ ನಿಯೋಜನೆಯಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿ.ಪರಿಷತ್ ಸದಸ್ಯ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಸಚಿವ ಬಿ.ರಮಾನಾಥ ರೈ ಅಭಿನಂದನಾ ಭಾಷಣ ನಡೆಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಪಕ್ಷದ ಪ್ರಮುಖರಾದ ಬಿ.ಇಬ್ರಾಹಿಂ, ಶಕುಂತಳಾ ಶೆಟ್ಟಿ, ಮಿಥುನ್ ರೈ, ಇನಾಯತ್ ಆಲಿ, ರಕ್ಷಿತ್ ಶಿವರಾಂ, ಕೃಷ್ಣಪ್ಪ, ಪ್ರವೀಣ್‌ಚಂದ್ರ ಆಳ್ವ, ಎಂ.ಶಶಿಧರ ಹೆಗ್ಡೆ, ಪದ್ಮರಾಜ್ ಆರ್., ಜಿ.ಎ. ಬಾವ, ಬಿ.ಎಚ್.ಖಾದರ್, ಅಶ್ವಿನ್ ಕುಮಾರ್, ಶಾಲೆಟ್ ಪಿಂಟೋ, ಲುಕ್ಮಾನ್, ಸುಹಾನ್ ಆಳ್ವ ಮುಂತಾದವರು ಉಪಸ್ಥಿತರಿದ್ದರು.

ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆ ದ.ಕ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಪಂಚಾಯತ್‌ರಾಜ್ ಕುರಿತಂತೆ ವಿವಿಧ ವಿ.ಸಭಾ ಕ್ಷೇತ್ರದ ಪ್ರಮುಖರಾದ ಶಾರದಾ ಬಿಳಿನೆಲೆ, ಜೋಸೆಫ್ ಕೆ.ಜೆ.ರಾಯ್, ನವೀನ್ ರೈ, ಜಗದೀಶ್ ಕೊಯಿಲ, ಹೈದರ್ ಕೈರಂಗಳ, ಹರಿಯಪ್ಪ, ರೇಖಾ ಶೆಟ್ಟಿ, ಮೊಹಮ್ಮದ್ ಬಡಗನ್ನೂರು, ಮಮತಾ ಗಟ್ಟಿ ಅವರು ವಿಚಾರ ಮಂಡಿಸಿದರು. ಎಂ.ಎಸ್.ಮಹಮ್ಮದ್ ವಂದಿಸಿದರು. ಕೆ.ಸಾಹುಲ್ ಹಮೀದ್ ಹಾಗೂ ಅಬ್ದುಲ್ ರಝಾಕ್ ಕುಕ್ಕಾಜೆ ನಿರೂಪಿಸಿದರು.

ಬಿಜೆಪಿ ಮುಳುಗಿದ ಹಡಗು

ರಾಜ್ಯದಲ್ಲಿ ಬಿಜೆಪಿ ಮುಳುಗಿದ ಹಡಗು, ನಾಲ್ಕೈದು ಮಂದಿ ಟ್ಯೂಬ್ ಹಾಕಿಕೊಂಡು ತೇಲುತ್ತಿದ್ದಾರೆ ಅಷ್ಟೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಅವರ ವಿರುದ್ಧ ಲೋಕಾಯುಕ್ತ ಕೇಸ್ ಇದೆ. ಪಿಎಸ್‌ಐ ನೇಮಕಾತಿ ಹಗರಣದ ಪಾಲು ಇದೆ. ಅವರ ತಂದೆ ಯಡಿಯೂರಪ್ಪಎರಡು ಬಾರಿ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲು ಕಾರಣ  ಭ್ರಷ್ಟಾಚಾರ. ಇದನ್ನು ಅವರದೇ ಪಕ್ಷದ ಯತ್ನಾಳ್ ಹೇಳಿರುವುದು.

ಮಲ್ಲಿಕಾರ್ಜುನ ಖರ್ಗೆ ಪುತ್ರ ನನಗೆ ಟಿಕೆಟ್ ನೀಡಿದರೆ ವಂಶಪಾರಂಪರ್ಯ ಎನ್ನುತ್ತಾರೆ. ಈಗ ಬಿಎಸ್‌ವೈ ಪುತ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿದರೆ, ಸಮರ್ಥ ನಾಯಕತ್ವ ಎಂದು ಬಿಜೆಪಿಗರು ಹೇಳುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಹೆಚ್ಚಿನ ಗ್ಯಾರಂಟಿಗಳಿಗೆ ಬಿಜೆಪಿ ಕಾರ್ಯಕರ್ತರಿಂದಲೇ ನೋಂದಣಿ

ರಾಜ್ಯ ಸರಕಾರ ಜಾರಿಗೆ ತಂದ ಗ್ಯಾರಂಟಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವುದು ಬಿಜೆಪಿಗರೇ. ಆ ಮೇಲೆ ಬಿಜೆಪಿಗರು ಗ್ಯಾರಂಟಿ ಯೋಜನೆಗಳ ಬಗ್ಗೆ ಆರೋಪಿಸುತ್ತಿದ್ದಾರೆ. ಇದು ಎಷ್ಟು ಸರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಪ್ರತಿದಿನ ಬಸ್‌ನಲ್ಲಿ ಶಕ್ತಿ ಯೋಜನೆಯಡಿ 60 ಲಕ್ಷ ಮಂದಿ ಪ್ರಯಾಣಿಸುತ್ತಾರೆ, ಇದರಲ್ಲಿ ಬಿಜೆಪಿ -ಜೆಡಿಎಸ್‌ಗೆ ಮತ ಹಾಕಿದವರೂ ಇಲ್ಲವೇ? ಶಕ್ತಿ ಯೋಜನೆ ಯಶಸ್ಸಿನಿಂದ ಭಕ್ತರ ಸಂಖ್ಯೆ ಹೆಚ್ಚಳ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರೇ ಸಿಎಂಗೆ ಪತ್ರ ಬರೆದಿದ್ದರು. 93 ಲಕ್ಷ ಮಂದಿ ಗೃಹಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿ ಇದ್ದಾರೆ. 74 ಲಕ್ಷ ಮಂದಿ ಗೃಹ ಜ್ಯೋತಿ ಭಾಗ್ಯ ಪಡೆಯುತ್ತಿದ್ದಾರೆ. ಇವರೆಲ್ಲರೂ ಕಾಂಗ್ರೆಸಿಗರೇ, ಬಿಜೆಪಿಯವರು ಇದರಲ್ಲಿ ಇಲ್ಲವೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾರ್ಮಿಕವಾಗಿ ಪ್ರಶ್ನಿಸಿದರು.

ಕರಾವಳಿಯಲ್ಲಿ ಅಂತರ್ಜಲ ಕುಸಿತ: ವಾಟರ್ ಅಡಿಟ್ ಸಮಿತಿ ರಚನೆ

ಕಳೆದ ಒಂದು ದಶಕದಲ್ಲಿ ಕರಾವಳಿ ಭಾಗದಲ್ಲಿ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿತ ಆಗಿದೆ. ಇದರ ಬಗ್ಗೆ ಪೂರ್ಣವಾಗಿ ಅಧ್ಯಯನ ಮಾಡಿ ಅಂತರ್ಜಲ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ವೈಜ್ಞಾನಿಕ ಸಮೀಕ್ಷೆ ನಡೆಸಲು ಇಸ್ರೋ ಸಹಿತ ವಿವಿಧ ತಜ್ಞರ ನೇತೃತ್ವದಲ್ಲಿ ವಾಟರ್ ಆಡಿಟ್ ಕಮಿಟಿ ರಚಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಹಿಂದೆ ಕರಾವಳಿಯಲ್ಲಿ ಕುಡಿಯುವ ನೀರು ಬೇಕಾಷ್ಟಿತ್ತು. ಆದರೆ ಈಗ ಕುಡಿಯುವ ನೀರಿನ ಕೊರತೆ ಕಂಡುಬರುತ್ತಿದೆ. ಹೀಗಾಗಿ ಅಂತರ್ಜಲದ ಬಗ್ಗೆ ಸ್ಥೂಲ ಅಧ್ಯಯನವನ್ನು ಕೆಲವೇ ತಿಂಗಳಲ್ಲಿ ನಡೆಸಿ ವರದಿ ಪಡೆದು ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.










 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News