ಸುರತ್ಕಲ್: ಚೇಳ್ಯಾರು ನದಿ ಪುನರುಜ್ಜೀವನಕ್ಕೆ ಆಗ್ರಹಿಸಿ ಧರಣಿ
ಸುರತ್ಕಲ್: ಇತಿಹಾಸ ಪ್ರಸಿದ್ದ ಚೇಳಾಯರು ಖಂಡಿಗೆ ನಂದಿನಿ ನದಿ ಸಂಪೂರ್ಣ ಕಲುಷಿತಗೊಂಡಿದ್ದು, ಅದನ್ನು ಶೀಘ್ರ ಪುನರುಜ್ಜೀವನ ಗೊಳಿಸಬೇಕೆಂದು ಆಗ್ರಹಿಸಿ ನಂದಿನಿ ನದಿ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಚೇಳಾಯರು ನದಿಯ ತಟದಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು, ಯಾವುದೇ ಪಕ್ಷ, ಜಾತಿಯನ್ನು ಧರ್ಮಗಳನ್ನು ನೋಡದೇ ಕೇವಲ ನಮ್ಮ ನಂದಿನಿ ನದಿಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಯಾವುದೇ ಅಸ್ಪತ್ರೆ, ಖಾಸಗಿ ಅಪಾರ್ಟ್ ಮೆಂಟ್, ಎಸ್.ಟಿ.ಪಿ., ವೆಟ್ ವೆಲ್ ನ ಕಲುಶಿತ ನೀರನ್ನು ನಮ್ಮ ನದಿಗೆ ಬಿಡದೆ ಕಲುಷಿತ ನೀರನ್ನು ಸಂಸ್ಕರಿಸಿ ಎಂ.ಆರ್.ಪಿ.ಎಲ್ ಸಂಸ್ಥೆಯು ಉಪಯೋಗಿಸಿಕೊಳ್ಳುವಂತೆ ಸಂಸದರು ಎಂಆರ್ಪಿಎಲ್ ಸಂಸ್ಥೆಯ ಜೊತೆ ಮಾತನಾಡಿ ಇದಕ್ಕೆ ಪೂರಕ ವ್ಯವಸ್ಥೆ ಅಗುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ನಂದಿನಿ ನದಿ ಉಳಿಸಿ ಎಂಬ ಹೋರಾಟ ಕೇವಲ ಇಂದು ಮಾತ್ರ ನಡೆಯದೇ ನಮ್ಮ ಸಮಸ್ಯೆ ಪರಿಹಾರ ಅಗುವವರೆಗೆ ಹೋರಾಟ ಮುಂದುವರಿಯಬೇಕು. ಯಾರದೋ ಒತ್ತಡಕ್ಕೆ, ಹಣದ ಆಮಿಷಕ್ಕೆ ಬಲಿಯಾಗಬಾರದು. ಇದರ ಹಿಂದೆ ಎಷ್ಟೇ ಬಲಿಷ್ಠ ರಾಜಕೀಯ ಪ್ರೇರಿತ ವ್ಯಕ್ತಿಗಳಿದ್ದರೂ ಅವರ ವಿರುದ್ದ ನಾವು ಹೋರಾಟಮಾಡಿ ನ್ಯಾಯ ಪಡೆದುಕೊಳ್ಳಬೇಕಿದೆ ಎಂದು ನುಡಿದರು.
ನಂದಿನಿ ನದಿ ಹೋರಾಟ ಸಮಿತಿಯ ಪ್ರಮುಖರಾದ ದಿವಾಕರ ಸಾಮಾನಿ ಬೇಡಿಕೆಗಳನ್ನು ಅಭೆಯ ಮುಂದಿಟ್ಟು ಮಾತನಾಡಿ, 15 ದಿನದ ಒಳಗೆ ನಮ್ಮ ನಂದಿನಿ ನದಿಗೆ ಬರುವ ಖಾಸಗಿ ಆಸ್ಪತ್ರೆ, ಎಸ್.ಟಿ.ಪಿ. ಪ್ಲಾಂಟ್, ವೆಟ್ ವೆಲ್ ನೀರು, ಖಾಸಗಿ ವಸತಿ ಸಮುಚ್ಚಯಗಳ ನೀರನ್ನು ಜಿಲ್ಲಾಡಳಿತ ಬಂದ್ ಮಾಡಬೇಕು. ನದಿಯಲ್ಲಿ ಬೆಳೆದಿರುವ ಕಲುಷಿತ ಗಿಡಗಂಟಿಗಳನ್ನು ತೆರವುಮಾಡಿ ನದಿಯನ್ನು ಸ್ವಚ್ಚಗೊಳಿಸಬೇಕು. ಇದಕ್ಕೆ ಜಿಲ್ಲಾಡಳಿತ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಗಬಹುದಾದ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತ ನೇರ ಹೊಣೆಯಾಗಲಿದೆ. ಅಲ್ಲದೆ, ಬಳಿಕ ದಿನಗಳಲ್ಲಿ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಇದೇ ಸಂದರ್ಭ ಚೇಳಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಡಾ. ಗಣೇಶ್ ಅಮೀನ್ ಸಂಕಮಾರ್, ವೀಣಾ ಶೆಟ್ಟಿ ಚೇಳಾಯರುಗುತ್ತು, ವಿದ್ವಾನ್ ಚಂದ್ರಶೇಖರ ನಾವಡ ಸೇರಿದಂತೆ ಗ್ರಾಮಸ್ಥರು ಅಭಿಪ್ರಾಯಗಳನ್ನು ಹಂಚಿಕೊಂಡರು. ಚೇಳಾಯರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೇಖಾ, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಯಶೋಧ, ಲತಾ, ವಸಂತಿ, ಪ್ರೇಮ ಶೆಟ್ಟಿ, ಸುಕುಮಾರಿ, ಚರಣ್ ಕುಮಾರ್, ಪ್ರತಿಮಾ ಶೆಟ್ಟಿ, ಮನಪಾ ಸದಸ್ಯೆ ಶ್ವೇತಾ ಪೂಜಾರಿ, ಪಡಪಣಂಬೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ವಿನೋದ್ ಬೆಳ್ಳಾಯರು, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಪ್ರಮುಖರಾದ ಸುಕೇಶ್ ಶೆಟ್ಟಿ ಖಂಡಿಗೆ, ರಮೇಶ್ ಪೂಜಾರಿ ಚೇಳಾಯರು, ಕಿರಣ್ ಶೆಟ್ಟಿ ಕೆರೆಮನೆ, ವಾಸುದೇವಾ ಶೆಟ್ಟಿ, ದಿವಾಕರ ಶೆಟ್ಟಿ, ವೆಂಕಟೇಶ ಶೆಟ್ಟಿ, ಮನೋಜ್ ಶೆಟ್ಟಿ ಚೇಳಾಯರು, ನಿತಿನ್ ಶೆಟ್ಟಿ ಖಂಡಿಗೆ, ಗಂಗಾಧರ ಪೂಜಾರಿ, ಚರಣ್ ಕುಮಾರ್, ಉದಯಕುಮಾರ್ ಶೆಟ್ಟಿ ಚೇಳಾರು, ಮಂಗಳೂರು ನಾಗರಿಕ ಸಲಹಾ ಸಮಿತಿ ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸುರತ್ಕಲ್ ಬಂಟರ ಸಂಘದ ನಿಕಟಪೂರ್ವಧ್ಯಕ್ಷ ಸುಧಾಕರ ಪೂಂಜ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ವಜ್ರಾಕ್ಷಿ ಪಿ. ಶೆಟ್ಟಿ, ಹಳೆಯಂಗಡಿ ರಂಗಭಟ್, ಮಿತ್ರಪಟ್ನದ ಸುರೇಶ್ ಕರ್ಕೆರ, ಕೆಥೋಲಿಕ್ ಸಭಾದ ಪೌಲ್ ಡಿಸೋಜ, ಸತೀಶ್ ಮುಂಚೂರು, ಜಯರಾಮ ಅಮೀನ್, ಸುಭಾಷಿತ ನಗರ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯ ಬಳಿಕ ಮುಲ್ಕಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಹಾಗೂ ಚೇಳಾಯರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿತ್ಯಾನಂದ ಅವರಿಗೆ ಪ್ರತಿಭಟನಾ ನಿರತರು ಸಭೆಯ ಒಮ್ಮತದ ನಿರ್ಣಯಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಿದರು.