×
Ad

ನ.16ರಂದು ಕಲ್ಪವೃಕ್ಷ ಯೋಜನೆಯ ಉತ್ಪನ್ನಗಳ ಬಿಡುಗಡೆ

Update: 2023-11-13 16:19 IST

ಮಂಗಳೂರು, ನ.13: ದ.ಕ. ತೆಂಗು ರೈತ ಉತ್ಪಾದಕರ ಸಂಸ್ಥೆಯ ವತಿಯಿಂದ ಪ್ರಾದೇಶಿಕ ಕಚೇರಿ ಉದ್ಘಾಟನೆ ಹಾಗೂ ಕಲ್ಪವೃಕ್ಷ ಯೋಜನೆಯ ಉತ್ಪನ್ನಗಳ ಬಿಡುಗಡೆ ನ. 16ರಂದು ಮರೋಳಿಯ ಸೂರ್ಯ ನಾರಾಯಣ ದೇವಸ್ಥಾನದ ಬಳಿ ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕಾವೂರಿನ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ನೂತನ ಕಚೇರಿಯ ಉದ್ಘಾಟನೆಯನ್ನು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ನೆರವೇರಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕುಸುಮಾಧರ್ ಎಸ್.ಕೆ. ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಸಂಸ್ಥೆಯು ಪ್ರಸ್ತುತ 10 ಶಾಖೆಗಳನ್ನು ಹೊಂದಿದ್ದು, 11ನೆ ಶಾಖೆ ಹಾಗೂ ಪ್ರಾದೇಶಿಕ ಕಚೇರಿ ಮರೋಳಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಇದೇ ವೇಳೆ ಪರಿಶುದ್ಧ ತೆಂಗಿನ ಎಣ್ಣೆ, ಕೊಬ್ಬರಿಯ ಚಟ್ನಿ ಪುಡಿ, ಕಲ್ಪಸಾರ ಬಯೋ ಫರ್ಟಿಲೈಸರ್, ಪ್ಲಾಂಟ್ ಇಮ್ಯೂನಿಟಿ ಬೂಸ್ಟರ್‌ಗಳು ಬಿಡುಗಡೆಗೊಳ್ಳಲಿವೆ ಎಂದವರು ಹೇಳಿದರು.

ತೆಂಗು ಬೆಳೆಗಾರರಿಗೆ ಸಮರ್ಪಕ ಸೌಲಭ್ಯ ಒದಗಿಸುವ ಉದ್ದೇಶದಿಂದ ಸಂಸ್ಥೆಯು ಪಂಚಕಲ್ಪ ಯೋಜನೆ ಜಾರಿಗೊಳಿಸಿದೆ. ಇದರಡಿ ಕಲ್ಪವೃಕ್ಷ ಯೋಜನೆಯಡಿ ತೆಂಗಿನಕಾಯಿಯ ಎಣ್ಣೆ, ತೆಂಗಿನಾಯಿ ಚಟ್ನಿ ಪುಡಿ, ತೆಂಗಿನಕಾಇ ನೀರಿನಿಂದ ತಯಾರಿಸಿದ ಸಾವಯವ ಗೊಬ್ಬರಗಳು ಬಿಡುಗಡೆಗೊಳ್ಳಲಿವೆ. ಇದಲ್ಲದೆ ನಾರಿನಿಂದ ತಯಾರಿಸಲ್ಪಡುವ ಎರೆಹುಳ್ಳು ಗೊಬ್ಬರ, ಕಾಂಪೋಸ್ಟ್ ತಯಾರಿ ಪ್ರಕ್ರಿಯೆಯಲ್ಲಿದೆ.

ಕಲ್ಪ ರಸ ಯೋಜನೆಯಡಿ (ನೀರಾ) ಘಟಕ ನಿರ್ಮಾಣದ ಕಾರ್ಯ ಚಾಲ್ತಿಯಲ್ಲಿದೆ. ಕಲ್ಪ ಸಮೃದ್ಧಿ ಯೋಜನೆಯಡಿ ಸ್ಥಿರ ಠೇವಣಿ ಮೇಲೆ ಶೇ. 12 ಬಡ್ಡಿದರದ ಪ್ರಯೋಜನವನ್ನು ನೀಡಲಾಗುತ್ತದೆ. ಕಲ್ಪ ಸಂಪರ್ಕದಡಿ ರೈತರಿಗೆ ಅಗತ್ಯ ಮಾಹಿತಿಯನ್ನು ತುಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಶುಲ್ಕ ರಹಿತವಾಗಿ ನೀಡಲಾಗುತ್ತದೆ. ಕಲ್ಪ ಸೇವಾ ಯೋಜನೆಯಡಿ ಸಿಪ್ಪೆ ಸಹಿತ ಹಾಗೂ ಸಿಪ್ಪೆ ರಹಿತ ತೆಂಗಿನಕಾಯಿ ಖರೀದಿಸಿ ಅಧಿಕ ಪ್ರಮಾಣದ ತೆಂಗಿನಕಾಯಿ ಇದ್ದಲ್ಲಿ ಮನೆ ಬಾಗಿಲಿನಿಂದ ಖರೀದಿಸಲಾಗುವುದು. 120ಕ್ಕೂ ಅಧಿಕ ಮಹಿಳೆಯರಿಗೆ ತೆಂಗಿನಕಾಯಿ ಗೆರಟೆಯಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಲಾಗಿದೆ. ತೆಂಗು ಕೊಯ್ಲುಗಾರರಿಗೆ ಉಚಿತ ಕೇರಾ ವಿಮಾ ಯೋಜನೆಯಡಿ ಪ್ರತಿ ಕೊಯ್ಲುಗಾರರಿಗೆ 5 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮೆ ಒದಗಿಸಲಾಗಿದೆ ಎಂದು ಅವರು ವಿವರಿಸಿದರು.

ಗೋಷ್ಟಿಯಲ್ಲಿ ಉಪಾಧ್ಯಕ್ಷ ಗಿರಿಧರ್, ಸಿಇಒ ಚೇತನ್, ನಿರ್ದೇಶಕಿ ಲತಾ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News