ರೆಂಜಲಾಡಿ: ಮರ ಬಿದ್ದು ಮನೆಗೆ ಹಾನಿ
Update: 2023-07-29 12:48 IST
ಪುತ್ತೂರು, ಜು.29: ಮನೆಯ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿರುವ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿ ಎಂಬಲ್ಲಿಂದ ವರದಿಯಾಗಿದೆ.
ರೆಂಜಲಾಡಿ ನಿವಾಸಿ ಸರ್ವೆ ಕಲ್ಪಣೆ ಸರಕಾರಿ ಪ್ರೌಢಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿರುವ ಮೋಹಿನಿ ಎಂಬವರ ಮನೆ ಮೇಲೆ ರಾತ್ರಿ ವೇಳೆ ಮರ ಮುರಿದು ಬಿದ್ದಿದೆ. ಇದರಿಂದ ಮನೆಯ ಹಿಂಭಾಗದ ಗೋಡೆ, ಶೀಟ್ ಸಂಪೂರ್ಣ ಕುಸಿದಿದೆ.
ಮನೆಯಲ್ಲಿ ಮೋಹಿನಿ ಮಾತ್ರ ವಾಸವಿದ್ದು ಅವರು ಮಾಡಾವಿನಲ್ಲಿರುವ ತನ್ನ ತಾಯಿಯ ಮನೆಗೆ ಹೋಗಿದ್ದ ವೇಳೆ ಘಟನೆ ಸಂಭವಿಸಿದ್ದರಿಂದ ಅನಾಹುತ ತಪ್ಪಿದೆ. ಘಟನೆಯಿಂದ ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಸ್ಥಳಕ್ಕೆ ಗ್ರಾಮ ಕರಣಿಕ ಉಮೇಶ್ ಕಾವಡಿ, ಗ್ರಾಮ ಸಹಾಯಕ ಹರ್ಷಿತ್ ನೇರೋಳ್ತಡ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.