×
Ad

ಬಯೋಮೆಟ್ರಿಕ್ ಹೆಸರಲ್ಲಿ ವಿದ್ಯಾರ್ಥಿವೇತನ ವಂಚಿಸುವ ಕ್ರಮ ಖಂಡನೀಯ: ಎಸ್.ಐ.ಓ

Update: 2023-08-25 10:58 IST

ಮಂಗಳೂರು: ವಿದ್ಯಾರ್ಥಿವೇತನ ಅಕ್ರಮದ ನೆಪದಲ್ಲಿ ಎನ್.ಎಸ್.ಪಿ (NSP) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳು ಬಯೋಮೆಟ್ರಿಕ್ ದೃಢೀಕರಣ ಮಾಡಿಕೊಂಡಲ್ಲಿ ಮಾತ್ರ ವಿದ್ಯಾರ್ಥಿವೇತನಕ್ಕೆ ಅರ್ಹರಾಗುತ್ತಾರೆ ಎನ್ನುವುದು ವಿದ್ಯಾರ್ಥಿ ವಿರೋಧಿ ನಡೆಯಾಗಿದೆ ಎಂದು ಎಸ್.ಐ.ಓ ಜಿಲ್ಲಾ ಘಟಕ  ಅಧ್ಯಕ್ಷರು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಈ ಪ್ರಕರಣದಲ್ಲಿ ಅನಗತ್ಯವಾಗಿ ವಿದ್ಯಾರ್ಥಿಗಳನ್ನು ಎಳೆದು ತಂದು ಅರ್ಹ ಅಭ್ಯರ್ಥಿಗಳನ್ನು ವಿದ್ಯಾರ್ಥಿವೇತನದಿಂದ ವಂಚನೆಗೊಳಿಸುವ ಷಡ್ಯಂತ್ರ ಹೊಂದಿದೆ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.

ವಿದ್ಯಾರ್ಥಿಗಳ ಬಯೋಮೆಟ್ರಿಕ್ ದೃಢೀಕರಣ ಮಾಡಿಕೊಳ್ಳುವ ಕ್ರಮವು ಅನಗತ್ಯವಾಗಿ ವಿದ್ಯಾರ್ಥಿಗಳನ್ನು ತೊಂದರೆಗೆ ಇಡು ಮಾಡಿದೆ, ಇಡೀ ಪ್ರಕರಣದಲ್ಲಿ ಆರೋಪ ಹೊತ್ತುಕೊಂಡಿರುವ ಶಿಕ್ಷಣ ಸಂಸ್ಥೆಗಳ ಪರಿಶೀಲನೆ ನಡೆಸಿದ ಮೇಲೆಯೇ ಸಕ್ರಮವಿರುವ ಸಂಸ್ಥೆಗಳ ವಿದ್ಯಾರ್ಥಿಗಳಿಗೂ ಬಯೋಮೆಟ್ರಿಕ್ ದೃಢೀಕರಣ ಮಾಡಬೇಕು ಎನ್ನುವುದು ಅವೈಜ್ಞಾನಿಕವಾದುದು‌, ಇದು ತೀರಾ ದುರುದ್ದೇಶದಿಂದ ಕೂಡಿದ ನಿರ್ಧಾರವಾಗಿದೆ.

ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ವಿದ್ಯಾರ್ಥಿಗಳು ಆಯಾ ಕಾಲೇಜುಗಳಲ್ಲಿ ದೃಢೀಕರಣ ಮಾಡಿಕೊಳ್ಳಲು ಸರ್ವರ್ ಸಮಸ್ಯೆ ಎದುರಾಗುತ್ತಿದ್ದು, ಇನ್ನೂ ಅನೇಕ ವಿದ್ಯಾರ್ಥಿಗಳು ದೃಢೀಕರಣ ಮಾಡಿಕೊಂಡಿಲ್ಲ. ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಅಗಸ್ಟ್ 25ನೇ ತಾರಿಖಿನ ವರೆಗೆ ಅಂತಿಮ ದಿನಾಂಕವನ್ನು ನಿಗದಿಗೊಳಿಸಿದ್ದು, ರಾಜ್ಯದಲ್ಲಿ ಅಂದಾಜು 3,69,000 ವಿದ್ಯಾರ್ಥಿಗಳು ಬಯೋಮೆಟ್ರಿಕ್ ದೃಢೀಕರಣ ಮಾಡಿಕೊಳ್ಳಬೇಕು ಎಂದು ಎಸ್.ಎಮ್.ಎಸ್ ಸಂದೇಶ ರವಾನೆ ಆಗಿದೆ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯದ ಮಾಹಿತಿ ಪ್ರಕಾರ ಬಯೋಮೆಟ್ರಿಕ್ ದೃಢೀಕರಣ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ 50 ಸಾವಿರ ಸಹ ದಾಟಿಲ್ಲ, ಈಗಿರುವಾಗ ನಾಳೆಯೇ ಕೊನೆಯ ದಿನಾಂಕವಾಗಿದ್ದು, ಒಂದೇ ವೇಳೆ ದಿನಾಂಕ ವಿಸ್ತರಣೆ ಆಗದೆ ಇದ್ದಲ್ಲಿ ರಾಜ್ಯದ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದಿಂದ ಹೊರಗುಳಿಯಲಿದ್ದಾರೆ. ಇದು ಅತ್ಯಂತ ಗಂಭೀರ ಸಂಗತಿಯಾಗಿದೆ.

ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣವನ್ನು ಪೊರೈಸಲು ಮತ್ತು ಉನ್ನತ ಶಿಕ್ಷಣದ ಕಲಿಕೆಗೆ ಉತ್ತೇಜನ ನೀಡಲು ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ ಅಡಿಯಲ್ಲಿ ನೀಡಲಾಗುತ್ತಿದ್ದ ಸ್ಕಾಲರ್ಶಿಪ್ ಸಹಾಯದಿಂದ ತಮ್ಮ ವ್ಯಾಸಂಗವನ್ನು ಪೂರ್ಣಗೊಳಿಸುತ್ತಿದ್ದರು, ಇದೀಗ ಕೇಂದ್ರ ಸರ್ಕಾರವು ಈ ಪ್ರಕರಣದ ನೆಪದಲ್ಲಿ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳನ್ನು ಬಲಿಪಶು ಮಾಡುತ್ತಿದೆ, ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವು ಈ ಹಿಂದಿನ ವರ್ಷ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಸಹ ನಿಲ್ಲಿಸಿ, ಅದಕ್ಕಾಗಿ ಆರ್ಟಿಇ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿತ್ತು, ಇದರಿಂದ ದೇಶದ ಕೋಟಿಗಟ್ಟಲೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯು ಕುಂಠಿತಗೊಂಡಿದೆ.ಈ ಹಗರಣವನ್ನು ಮುಂದಿಟ್ಟುಕೊಂಡು ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿವೇತನ ನೀಡುವುದು ತಡವಾಗಬಾರದು ಅಥವಾ ಈ ನೆಪದಲ್ಲಿ ಯೋಜನೆ ನಿಲ್ಲಿಸಕೂಡದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕೇಂದ್ರ ಸರ್ಕಾರವು ಬಯೋಮೆಟ್ರಿಕ್ ದೃಢೀಕರಣ ಮಾಡಿಕೊಳ್ಳುವ ಅಂತಿಮ ದಿನಾಂಕವನ್ನು ವಿಸ್ತರಿಸಿ, ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಅಥವಾ ಈ ಬಯೋಮೆಟ್ರಿಕ್ ದೃಢೀಕರಣ ಕ್ರಮವನ್ನು ಈ ಬಾರಿಗೆ ಮಾತ್ರ ನಿಲ್ಲಿಸಿ, ಮುಂದಿನ ವರ್ಷದ ಅರ್ಜಿ ಸಲ್ಲಿಕೆ ಅವಧಿಯಲ್ಲಿ ಕಡ್ಡಾಯಗೊಳಿಸಬಹುದು ಎಂದು ಎಸ್.ಐ.ಓ ಆಗ್ರಹಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News