ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆ: ರಸ್ತೆ, ಪೈಪ್ ಲೈನ್ ಕಾಮಗಾರಿ ಸರಿಪಡಿಸಲು ಆಗ್ರಹ
ಉಳ್ಳಾಲ: ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಯಿಂದಾಗಿ ಕುಂಪಲ ರಸ್ತೆ ಹದಗೆಟ್ಟು ಹೋಗಿದೆ. ಈ ರಸ್ತೆಗೆ ಶೀಘ್ರ ಕಾಂಕ್ರೀಟೀಕರಣ ಮಾಡಬೇಕು. ಪೈಪ್ ಲೈನ್ ಕಾಮಗಾರಿ ಸರಿಪಡಿಸಬೇಕು ಎಂಬ ಆಗ್ರಹ ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು.
ಸೋಮೇಶ್ವರ ಪುರಸಭೆ ಅಧ್ಯಕ್ಷ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಪುರುಷೋತ್ತಮ ಶೆಟ್ಟಿ, ದೀಪಕ್ ಪಿಲಾರ್ ಹದಗೆಟ್ಟ ರಸ್ತೆಗೆ ಮರು ಕಾಂಕ್ರೀಟ್ ಆಗಬೇಕು. ಹೊಂಡ ನಿರ್ಮಿಸಿ ಅಪಘಾತಕ್ಕೆ ಅವಕಾಶ ನೀಡಬೇಡಿ ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ರವಿಶಂಕರ್ ಮಾತನಾಡಿ, ರಸ್ತೆಗೆ ಕಾಂಕ್ರೀಟೀಕರಣ ಸಾಧ್ಯ ಇಲ್ಲ. ಡಾಮರೀಕರಣ ಮಾಡಬಹುದು ಎಂದರು.
ಕುಡಿಯುವ ನೀರು ಪೈಪ್ ಲೈನ್ ಕಾಮಗಾರಿಯಿಂದ ಆಗಿರುವ ಅವ್ಯವಸ್ಥೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಸದಸ್ಯರು ಅಮೃತ್ 2.0 ಕುಡಿಯುವ ನೀರು ಯೋಜನೆ ಅಧಿಕಾರಿ ಶೋಭಾ, ಸಹಾಯಕ ಇಂಜಿನಿಯರ್ ಶ್ರೀಕಾಂತ್ ಅವರನ್ನು ತರಾಟೆಗೈದು ಪೈಪ್ ಲೈನ್ ಕಾಮಗಾರಿ ಆದ ಜಾಗ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
ಯೆನೆಪೋಯ ಆಸ್ಪತ್ರೆ ಯಿಂದ ಹಿಡಿದು ಬೈಪಾಸ್ ವರೆಗೆ ರಸ್ತೆ ಸುರಕ್ಷಿತ ಆಗಿರಬೇಕು. ಇಲ್ಲಿ ಜನ ಸಂದಣಿ ಜಾಸ್ತಿ ಇದೆ. ಪೈಪ್ ಲೈನ್ ಕಾಮಗಾರಿ , ಜೋಡಣೆ ಸರಿಯಾಗಿರಬೇಕು ಎಂದು ವಿರೋಧ ಪಕ್ಷದ ನಾಯಕ ಪುರುಷೋತ್ತಮ ಪಿಲಾರ್ ಹೇಳಿದರು.
ಮನೋಜ್ ಮಾತನಾಡಿ, ಕುಂಪಲ ರಸ್ತೆ ಬದಿ ಕಲ್ಲು ಹಾಕಿದ್ದಾರೆ. ಇದರಿಂದ ಮಳೆ ನೀರು ಯತೀಮ್ ಖಾನದ ಹತ್ತಿರ ಹರಿದು ಹೋಗುತ್ತದೆ. ಈ ಸಮಸ್ಯೆ ಇತ್ಯರ್ಥ ಪಡಿಸುವಂತೆ ಕೋರಿದರು.
ಅಮೃತ್ 2.0 ಕುಡಿಯುವ ನೀರು ಪೈಪ್ ಲೈನ್ ಕಾಮಗಾರಿ ವಿಭಾಗದ ಅಧಿಕಾರಿ ಶೋಭಾ ಮಾತನಾಡಿ,ಈ ಬಗ್ಗೆ ಇಂಜಿನಿಯರ್ ಜೊತೆ ಮಾತನಾಡಿ ವರದಿ ಪಡೆದು ಕ್ರಮ ಕೈಗೊಳ್ಳುತ್ತೇನೆ. ಕಾಮಗಾರಿ ಯಿಂದ ಹದಗೆಟ್ಟ ರಸ್ತೆ ಗಳನ್ನು ಶೀಘ್ರ ದುರಸ್ತಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ದೀಪಕ್ ಪಿಲಾರ್ ಮಾತನಾಡಿ ನಾವು ಸಮಸ್ಯೆ ಹೇಳುವುದು, ನೀವು ಭರವಸೆ ಕೊಡುವುದು ಬೇಡ.ಶೀಘ್ರ ಪರಿಶೀಲನೆ ನಡೆಸಿ ಕೆಲಸ ಆರಂಭಿಸಬೇಕು ಎಂದರು.
ಉಪಾಧ್ಯಕ್ಷ ರವಿ ಶಂಕರ್ ಮಾತನಾಡಿ, ರಸ್ತೆ ವಿಚಾರದಲ್ಲಿ ಗೊಂದಲ ಬೇಡ.ಒಂದೊಂದು ರಸ್ತೆ ಸಮಸ್ಯೆ ದುರಸ್ತಿ ಮಾಡುತ್ತಾ ಹೋಗಬೇಕು.ಸ್ವಾತಂತ್ರ್ಯ ವೇಳೆ ಸ್ವಚ್ಛ ಆಗಿರಬೇಕು.ಈ ಬಗ್ಗೆ ಪದೇ ಪದೇ ಗಮನ ಸೆಳೆಯಲು ನಮಗೆ ಸಾಧ್ಯ ಆಗದು ಎಂದರು.
ಬಟ್ಟಪ್ಪಾಡಿ, ಉಚ್ಚಿಲ ರಸ್ತೆ ದುರಸ್ತಿ ಮಾಡುವಂತೆ ಕೌನ್ಸಿಲರ್ ಸಲಾಮ್ ಪಿಡಬ್ಲ್ಯೂಡಿ ಅಧಿಕಾರಿಗಳ ಗಮನ ಸೆಳೆದರು.
ಕೋಟೆಕಾರ್, ಅಡ್ಕ ಚರಂಡಿ ಸಮಸ್ಯೆ, ಹದಗೆಟ್ಟ ಪಿಡಬ್ಲ್ಯುಡಿ ರಸ್ತೆ, ಯೆನೆಪೋಯ ರಸ್ತೆ ಅಭಿವೃದ್ಧಿ ಬಗ್ಗೆ ಉಪಾಧ್ಯಕ್ಷ ರವಿ ಶಂಕರ್ ಪಿಡಬ್ಲ್ಯುಡಿ ಸಿಬ್ಬಂದಿ ಸಿದ್ದಾರ್ಥ್ ಅವರ ಗಮನ ಸೆಳೆದರು.
ನಾಲ್ಕು ಸ್ಥಾಯಿ ಸಮಿತಿ ರಚನೆಗೆ ಸರ್ಕಾರದ ಸುತ್ತೋಲೆ ಇದೆ. ಸ್ಥಾಯಿ ಸಮಿತಿ ವಿಸ್ತರಿಸಿ ಅಭಿವೃದ್ಧಿ ಕಾಮಗಾರಿ ಮಾಡಿ. ಪಿಲಾರ್ ಗೆ ದಾರಿದೀಪ ಅಳವಡಿಸಿ ಎಂದು ಪುರುಷೋತ್ತಮ ಶೆಟ್ಟಿ ಪಿಲಾರ್ ಸಭೆಗೆ ತಿಳಿಸಿದರು.
ವಿಲೇವಾರಿ ಆಗದ ಕಸ ಮತ್ತದರ ಪರಿಹಾರದ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷ ಪ್ರವೀಣ್, ಮುಖ್ಯಾಧಿಕಾರಿ ಮತ್ತಡಿ ಉಪಸ್ಥಿತರಿದ್ದರು.
ಸಭೆ ವೀಕ್ಷಿಸಲು ಆಗಮಿಸಿದ ವಿದ್ಯಾರ್ಥಿಗಳು: ಉಚ್ಚಿಲ ಗುಡ್ಡೆ ಪಿಎಂಶ್ರೀ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆಗೆ ಆಗಮಿಸಿ ಸಭೆಯನ್ನು ವೀಕ್ಷಣೆ ಮಾಡಿದರು. ಬಳಿಕ ವಿದ್ಯಾರ್ಥಿಗಳು, ಶಾಸಕಾಂಗ ಹಾಗೂ ಸಮಸ್ಯೆ ಬಗೆ ಸಭೆಯಲ್ಲಿ ಪ್ರಶ್ನೆ ಕೇಳಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಮತ್ತಡಿ ಅವರು ಸರ್ಕಾರದ ಮೂರು ಅಂಗ, ಮತ್ತದರ ಜವಾಬ್ದಾರಿ , ಪುರಸಭೆಯ ಅಗತ್ಯತೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮುಚ್ಚುವ ಹಂತದಲ್ಲಿದ್ದ ಈ ಶಾಲೆಯಲ್ಲಿ ಈಗ 210 ವಿದ್ಯಾರ್ಥಿಗಳು ಇದ್ದಾರೆ. 15 ಲಕ್ಷ ವೆಚ್ಚದಲ್ಲಿ ಇದರ ಕಾಮಗಾರಿ ನಡೆಯಲಿದ್ದು, ಅಭಿವೃದ್ಧಿ ಪಥದಲ್ಲಿ ಇದೆ ಎಂದು ಕೌನ್ಸಿಲರ್ ಸಲಾಮ್ ಸಭೆಗೆ ತಿಳಿಸಿದರು. ಮುಖ್ಯೋಪಾಧ್ಯಾಯ ಹರೀಶ್, ದೈಹಿಕ ಶಿಕ್ಷಕ ಮೋಹನ್ ಶಿರ್ಲಾಲು ಜೊತೆಗಿದ್ದರು.