×
Ad

ಜ.31, ಫೆ.1ರಂದು ರಾಜ್ಯ ಮಟ್ಟದ ಮಹಿಳೆಯರ ಸಮ್ಮೇಳನ

Update: 2025-11-11 18:42 IST

ಮಂಗಳೂರು, ನ.11: ರಾಜ್ಯದ 31 ಜಿಲ್ಲೆಗಳ ಮಹಿಳೆಯರನ್ನು ಸಂಘಟಿಸುವ ಉದ್ದೇಶದಿಂದ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಜ.31 ಮತ್ತು ಫೆ.1ರಂದು ನಗರದ ಪುರಭವನದಲ್ಲಿ ರಾಜ್ಯ ಮಟ್ಟದ ಮಹಿಳೆಯರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ ಹೇಳಿದರು.

ಮಂಗಳವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಸಬಲೀಕರಣಕ್ಕಾಗಿ 40 ವರ್ಷಗಳ ಹಿಂದೆ ಸ್ಥಾಪನೆಯಾದ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟವು ತಾಲೂಕಿನ 125 ಮಹಿಳಾ ಮಂಡಳಿಗಳನ್ನು ಒಳಗೊಂಡ ಬಹುಮುಖ ನೆಲೆಯ ಸಂಘಟನೆಯಾಗಿದೆ ಎಂದರು.

ಸಮ್ಮೇಳನದ ಅಂಗವಾಗಿ ಮಹಿಳಾ ಒಕ್ಕೂಟವು ರಾಜ್ಯದ ಮಹಿಳೆಯರ ಸೃಜನಶೀಲತೆ ಮತ್ತು ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆಯಾಯ ಜಿಲ್ಲೆಯ ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಿ ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಒದಗಿಸಲಾಗಿದೆ. ಪ್ರತಿಯೊಂದು ತಂಡಗಳಿಗೂ 20 ನಿಮಿಷಗಳ ಅವಧಿಯ ವೈವಿಧ್ಯದ ಪ್ರಸ್ತುತಿಗೆ ಆದ್ಯತೆ ಇದೆ. ಇದರಲ್ಲಿ ವಿಜೇತ ತಂಡಗಳಿಗೆ 1,00,000 ರೂ., 75,000 ರೂ. ಮತ್ತು 50,000 ರೂ.ಗಳ ನಗದು ಬಹುಮಾನವಿದೆ. ಉತ್ತಮ ನಿರೂಪಣೆ, ಸಂದೇಶ ಸಾರುವ ಪ್ರದರ್ಶನಕ್ಕೆ ಪ್ರತ್ಯೇಕ ನಗದು ಮತ್ತು ಫಲಕ ಸಹಿತ ಗೌರವಾರ್ಪಣೆ ಮಾಡಲಾಗುವುದು. ಭಾಗವಹಿಸಿದ ಪ್ರತಿಯೊಂದು ತಂಡಗಳಿಗೆ 10,000 ರೂ. ಪ್ರೋತ್ಸಾಹವಾಗಿ ಬಹುಮಾನ ನೀಡಲಾಗುವುದು ಎಂದು ಚಂಚಲ ತೇಜೋಮಯ ನುಡಿದರು.

ಸಮಾಜದ ಚಿತ್ರಣವನ್ನು ಬದಲಾಯಿಸುವಲ್ಲಿ ಕೊಡುಗೆ ನೀಡಿದ ಮಹಿಳಾ ಸಶಕ್ತಿಕರಣದ ಸಾಧಕಿಯರನ್ನು ಗೌರವಿಸುವ ಸಲುವಾಗಿ ಕರ್ನಾಟಕ ರಾಜ್ಯ ಮಹಿಳಾ ರತ್ನ’ ಪ್ರಶಸ್ತಿಯನ್ನು ಸಮಾಜ ಸೇವೆ, ಕೃಷಿ ಕ್ಷೇತ್ರ, ಜಾನಪದ ಕ್ಷೇತ್ರ, ರಂಗಭೂಮಿ, ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಐವರು ಸಾಧಕಿಯರಿಗೆ ನೀಡಲಾಗುವುದು. ಪ್ರಶಸ್ತಿಯು 1,00,000 ರೂ. ನಗದು, ಫಲಕ ಮತ್ತು ಗೌರವಾರ್ಪಣೆಗಳನ್ನು ಒಳಗೊಂಡಿರುತ್ತದೆ. ಜತೆಗೆ 35 ವರ್ಷ ಒಳಗಿನ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಲೇಖನ ಸ್ಪರ್ಧೆ ಏರ್ಪಡಿಸಲಾಗಿದೆ. ಸಮಾವೇಶದಲ್ಲಿ ಚರ್ಚಾಗೋಷ್ಠಿ, ವಿವಿಧ ಶಿಬಿರ ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಶ್ವೇತಾ, ಒಕ್ಕೂಟದ ಗೌರವಾಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ, ಗೌರವ ಸಲಹೆಗಾರೆ ದೇವಕಿ ಅಚ್ಯುತ, ಉಪಾಧ್ಯಕ್ಷೆ ಮನೋರಮಾ ಉಮೇಶನ್, ಕಾರ್ಯದರ್ಶಿ ರೇಖಾ ಶೆಟ್ಟಿ, ಕೋಶಾಧಿಕಾರಿ ಭಾರತಿ ಎಂ., ಕ್ರೀಡಾ ಕಾರ್ಯದರ್ಶಿ ಲತಾ ಎಲ್.ಎನ್. ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರೇಮ ಮಾದವ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News