×
Ad

ಡಿ.1ರಂದು ಪೌರ ಕಾರ್ಮಿಕರ ಸಂಘದಿಂದ ಸಾಂಕೇತಿಕ ಪ್ರತಿಭಟನೆ

Update: 2023-11-27 16:21 IST

Photo: freepik

ಮಂಗಳೂರು.ನ,27: ದಕ್ಷಿಣ ಕನ್ನಡ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘ(ರಿ) ಡಿ.1 ರಂದು ಸಂಜೆ 4 ಗಂಟೆಗೆ ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಬೃಹತ್ ಪ್ರತಿಭಟನೆಯನ್ನು ನಡೆಸಲಿದೆ ಎಂದು ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರ ನೇರ ನೇಮಕಾತಿ ಹಾಗೂ ನೇರ ಪಾವತಿಗೆ ಗೆ ಸಂಬಂಧಿಸಿ ನೀಡಲಾದ ಘೋಷಣೆ ಪೂರ್ಣ ಪ್ರಮಾಣದಲ್ಲಿ ಅನುಷ್ಟಾನವಾಗಿಲ್ಲ ಎಂದು ಆಕ್ಷೇಪಿಸಿದರು.

2022ರ ಜುಲೈ 1ರಂದು ಹಿಂದಿನ ಮುಖ್ಯಮಂತ್ರಿ ಪೌರ ಕಾರ್ಮಿಕರ ಮುಖಂಡರ ಜತೆ ಚರ್ಚಿಸಿ ಎಲ್ಲ ನೇರಪಾವತಿ ಪೌರ ಕಾರ್ಮಿಕರನ್ನು ಖಾಯಂ ಮಾಡಲಾಗುವುದು ಹಾಗೂ ಹೊರಗುತ್ತಿಗೆ ಲೋಡರ್ಸ್, ಒಳಚರಂಡಿ ಸ್ವಚ್ಚತಾ ಕಾರ್ಮಿಕರು ಮತ್ತು ಕಸದ ವಾಹನ ಚಾಲಕರನ್ನು ಹಾಗೂ ಸಹಾಯಕರನ್ನು ಗುತ್ತಿಗೆ ಪದ್ಧತಿಯಿಂದ ಮುಕ್ತಿಗೊಳಿಸಿ ನೇರ ಪಾವತಿಗೆ ಸೇರಿಸಲಾಗುವುದು ಎಂದು ಲಿಖಿತ ಭರವಸೆ ನೀಡಿದ್ದರು. ಇದಕ್ಕೂ ಮೊದಲು 2018ರಲ್ಲಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಎಲ್ಲಾ ಗುತ್ತಿಗೆ ಪೌರ ಕಾರ್ಮಿಕರು ಮತ್ತು ಇತರೆ ಸ್ವಚ್ಚತಾ ಕಾರ್ಮಿಕರ್ನು ಖಾಯಂ ಮಾಡಲು ನಿರ್ಧರಿಸಿದ್ದರು. ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರ ಕೂಡಲೇ ಪೌರ ಕಾಮಿರ್ಕರನ್ನು ಖಾಯಂ ಮಾಡುವುದಾಗಿ ಹೇಳಿತ್ತು. ಆದರೆ ಘೋಷಣೆ, ತೀರ್ಮಾನಗಳು ಪೂರ್ಣಪ್ರಮಾಣದಲ್ಲಿ ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ಕಾಳಜಿ ವಹಿಸಿಲ್ಲ ಎಂದು ಅವರು ದೂರಿದರು.

ಪ್ರತಿಭಟನೆಯ ಮೂಲಕ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಸ್ಯೆಗಳನ್ನು ರಾಜ್ಯ ಸರಕಾರದ ಗಮನಕ್ಕೆ ತರಲಾಗುವುದು. ಜಿಲ್ಲೆಯಾದ್ಯಂತ ನಗರ ಸ್ಥಳೀಯಸಂಸ್ಥೆಗಳಲ್ಲಿ ಖಾಲಿ ಇರುವ 164 ಪೌರ ಕಾರ್ಮಿಕರ ಹುದ್ದೆಯನ್ನು ಅರ್ಜಿ ಸಲ್ಲಿಸಿರುವ ಸ್ಥಳೀಯ ಪೌರ ಕಾರ್ಮಿಕರಿಂದ ಭರ್ತಿ ಮಾಡಬೇಕು. ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ 167 ಪೌರ ಕಾರ್ಮಿಕರ ಸೇವಾ ನಗದು ಸಂಸ್ಥೆಯಿಂದ ಕೊಡಲು ಬಾಕಿ ಇದ್ದು ಅದನ್ನು ಪಾವತಿಸಬೇಕು. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೇರ ನೇಮಕಾತಿಯಲ್ಲಿ ಆಗಸ್ಟ್ ತಿಂಗಳಲ್ಲಿ ಸುಮಾರು 652 ಪೌರ ಕಾರ್ಮಿಕರೆಂದು ನೇರಪಾವತಿ ಪಟ್ಟಿ ತಯಾರಿಸಿ ಆದೇಶಿಸಲಾಗಿತ್ತು. ಬಳಿಕ ನ.1ರಂದು 445 ಪೌರ ಕಾರ್ಮಿಕರ ನೇರನೇಮಕಾತಿ ಪಟ್ಟಿ ತಯಾರಿಸಿ ಆದೇಶ ಪತ್ರ ನೀಡಲಾಗಿದೆ. ಉಳಿದ 207 ಪೌರ ಕಾರ್ಮಿಕರು ಎಲ್ಲಿ ಎಂಬ ಬಗ್ಗ ತನಿಖೆ ನಡೆಸಿ ಸೂಕ್ತ ಕಾನೂನುಕ್ರಮ ವಹಿಸಬೇಕು.

ನೇಮಕಾತಿಗೊಂಡ ಪೌರ ಕಾರ್ಮಿಕರಿಗೆ ಸೂಕ್ತ ವೇತನ, ಆರೋಗ್ಯ ಭದ್ರತೆ ಒದಗಿಸಬೇಕು. ಎನ್‌ಪಿಎಸ್ ರದ್ದುಗೊಳಿಸಿ ಹಳೆಯ ಪಿಂಚಣಿ ಜಾರಿಗೊಳಿಸಬೇಕು. 2006ರ ಉಮಾಭಾರತಿ ಪ್ರಕರಣದ ಸುಪ್ರೀಂಕೋರ್ಟ್ ಆದೇಶದಂತೆ ಮನಪಾದಲ್ಲಿ ಖಾಯಗೊಂಡ 103 ಪೌರ ಕಾರ್ಮಿಕರ 10 ವರ್ಷದ ಹಿಂಬಾಕಿಯನ್ನು ಪಾವತಿಸಬೇಕು ಸೇರಿದಂತೆ ಇತರ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಫಟನೆ ನಡೆಯಲಿದೆ ಎಂದು ಅವರು ಹೇಳಿದರು.

ಗೋಷ್ಟಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಆನಂದ, ಜಿಲ್ಲಾಸಮಿತಿ ಸದಸ್ಯ ಸೇಸಪ್ಪ, ಸಂಜೀವ ಮಂಕಿಸ್ಟ್ಯಾಂಡ್, ಸುರೇಶ್ ಗಾಂಧಿನಗರ, ಶ್ರೀನಿವಾಸ ವಾಮಂಜೂರು, ಪ್ರಕಾಶ್ ಕಂಕನಾಡಿ, ನೀಲಯ್ಯ ಕುಲಾಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News