×
Ad

ಜ.18ರಂದು ಜಾಗತಿಕ ಬಿಲ್ಲವರ ಪ್ರಥಮ ಕ್ರೀಡೋತ್ಸವ

Update: 2025-10-25 13:59 IST

ಮಂಗಳೂರು, ಅ. 25: ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ಜನವರಿ 18ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಜಾಗತಿಕ ಬಿಲ್ಲವರ ಪ್ರಥಮ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಯೂನಿಯನ್‌ನ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಈ ಬಗ್ಗೆ ಈಗಾಗಲೇ ಬಿಲ್ಲವ ಸಂಘಗಳ ಪ್ರತಿನಿಧಿಗಳ, ಸಮಾಜ ಮುಖಂಡರ ಸಭೆ ನಡೆದಿದೆ. ಕ್ರೀಡೋತ್ಸವದ ಲೋಗೋ ಬಿಡುಗಡೆಯನ್ನು ಈಗಾಗಲೇ ಖ್ಯಾತ ನಟ ಡಾ. ಶಿವರಾಜ್ ಕುಮಾರ್ ಬೆಂಗಳೂರಿನಲ್ಲಿ ನಡೆಸಿದ್ದಾರೆ.

ಕ್ರೀಡೋತ್ಸವದಲ್ಲಿ ಸಮಾಜದ ಪುರುಷರಿಗೆ ಕಬಡ್ಡಿ ಮತ್ತು ವಾಲಿಬಾಲ್, ಮಹಿಳೆಯರಿಗೆ ಕಬಡ್ಡಿ ಮತ್ತು ತ್ರೋಬಾಲ್ ಪಂದ್ಯಾಟ ನಡೆಯಲಿದೆ. ಭಾಗವಹಿಸುವ ತಂಡಗಳು ಹೆಸರನ್ನು ಅ.27ರಿಂದ ನವೆಂಬರ್ 30ರೊಳಗೆ ಆನ್‌ಲೈನ್‌ನಲ್ಲಿ ನಿಯಮ, ನಿಬಂಧನೆಗೆ ಅನುಸಾರವಾಗಿ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ 9242783800ನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಪುರುಷಕರ ಕಬಡ್ಡಿಯಲ್ಲಿ ಮೊದಲು ನೋಂದಾಯಿಸಿದ 24, ವಾಲಿಬಾಲ್‌ನಲ್ಲಿ 16, ಮಹಿಳೆಯರ ಕಬಡ್ಡಿ ಹಾಗೂ ತ್ರೋಬಾಲ್‌ನಲ್ಲಿ ತಲಾ 16 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ವಿಜೇತ ತಂಡಗಳಿಗೆ ಪುರುಷರ ಕಬಡ್ಡಿಯಲ್ಲಿ ಟ್ರೋಫಿಯೊಂದಿಗೆ ಪ್ರಥಮ 2 ಲಕ್ಷ ರೂ., ದ್ವಿತೀಯ 1 ಲಕ್ಷ ರೂ., ತೃತೀಯ 50 ಸಾವಿರ ರೂ., ಚತುರ್ಥ 25 ಸಾವಿರ ರೂ. ನಗದು ಬಹುಮಾನವಿರಲಿದೆ. ಮಹಿಳಾ ಕಬಡ್ಡಿ, ತ್ರೋಬಾಲ್ ಮತ್ತು ಪುರುಷರ ವಾಲಿಬಾಲ್‌ಗೆ ಪ್ರಥಮ ತಲಾ 1 ಲಕ್ಷ ರೂ., ದ್ವಿತೀಯ 50 ಸಾವಿರ ರೂ., ತೃತೀಯ 25 ಸಾವಿರ ರೂ., ಮತ್ತು ಚತುರ್ಥ 10 ಸಾವಿರ ರೂ. ನಗದು ಬಹುಮಾನವಿರಲಿದೆ. ವೈಯಕ್ತಿಕ ಸಾಧನೆಗಳಿಗೂ ಪ್ರತ್ಯೇಕ ಬಹುಮಾನವಿರುತ್ತದೆ. ಸಮಾಜದ ಸಂಘಟನೆಯ ದೃಷ್ಟಿಯಿಂದ ಈ ಕ್ರೀಡಾಕೂಟ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅವರು ವಿವರ ನೀಡಿದರು.

ಗೋಷ್ಟಿ.ಯಲ್ಲಿ ಯೂನಿಯನ್ ಉಪಾಧ್ಯಕ್ಷರಾದ ಲೋಕನಾಥ್ ಅಮೀನ್, ಕೆ.ಟಿ. ಸುವರ್ಣ, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು, ಕ್ರೀಡಾ ಪ್ರಧಾನ ಸಂಚಾಲಕ ಸದಾನಂದ ಪೂಜಾರಿ, ಕ್ರೀಡಾ ಕೋಶಾಧಿಕಾರಿ ಜಯಪ್ರಕಾಶ್, ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News