ಸ್ಟಾಕ್ ಮಾರ್ಕೆಟ್‌ನಲ್ಲಿ ಅಧಿಕ ಲಾಭದ ಆಮಿಷ: ಲಕ್ಷಾಂತರ ರೂ. ವಂಚನೆ
ಮಂಗಳೂರು, ಸೆ.27: ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ನೀಡಲಾಗುವುದು ಎಂದು ನಂಬಿಸಿ ಹಂತ ಹಂತವಾಗಿ 45.10 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡು ಬಳಿಕ ವಂಚನೆ ಮಾಡಿದ ಬಗ್ಗೆ ಮಹಿಳೆಯೊಬ್ಬರು ನಗರದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತನ್ನ ವಾಟ್ಸ್‌ಆ್ಯಪ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿದಾಗ ಇಂಡಿಯನ್ ಮಾರ್ಕೆಟ್ ಫೋರಂ ಎಂಬ ಗ್ರೂಪ್ ಓಪನ್ ಆಗಿತ್ತು. ಅದರಲ್ಲಿ ಬಂದ ಸ್ಟಾಕ್ ಮಾರ್ಕೆಟ್‌ನ ಜಾಹೀರಾತು ಗಮನಿಸಿದೆ. ಹೂಡಿಕೆ ಬಗ್ಗೆ ಆಸಕ್ತಿ ಇದ್ದರೆ ಸೆರ್ಬರ್ ಇನ್ವಿ ಎಂಬ ಆ್ಯಪ್‌ನಲ್ಲಿ ನೊಂದಾಯಿಸುವಂತೆ ಲಿಂಕ್ ಕಳುಹಿಸಿದ್ದರು. ತಾನು ಆ ಲಿಂಕ್ ಮೂಲಕ ತನ್ನ ಹೆಸರು, ವಿಳಾಸ ಸಹಿತ ಸಂಪೂರ್ಣ ಮಾಹಿತಿಯನ್ನು ದಾಖಲಿಸಿದ್ದೆ. ಬಳಿಕ ಹಿಂದಿನ ವಾಟ್ಸ್‌ಆ್ಯಪ್ ಗ್ರೂಪ್‌ನಿಂದ ತೆಗೆದು ಬೇರೊಂದು ಗ್ರೂಪ್‌ನಲ್ಲಿ ಸೇರಿಸಿದ್ದರು. ಅದರಲ್ಲಿ ಶೇರ್ ಮಾರ್ಕೆಟಿಂಗ್, ಸ್ಟಾಕ್ಸ್ ಇನ್‌ವೆಸ್ಟ್‌ಮೆಂಟ್ ಬಗ್ಗೆ ವಿವರಿಸಿ ಹೆಚ್ಚಿನ ಲಾಭ ಗಳಿಸಲು ಹಣ ಹಾಕುವ ಮೂಲಕ ರಿಚಾರ್ಜ್ ಮಾಡಬೇಕೆಂದು ಸೂಚಿಸಿದ್ದರು. ಅಲ್ಲದೆ ರಿಚಾರ್ಜ್ ಮಾಡಲು ಅಡ್ಮಿನ್ ರಿಯಾ ಎಂಬವರನ್ನು ಸಂಪರ್ಕಿಸಿ ಎಂದು ನಂಬರ್ ನೀಡಿದ್ದರು. ಆಕೆಯನ್ನು ಸಂಪರ್ಕಿಸಿದಾಗ ವಿವಿಧ ಬ್ಯಾಂಕ್ ಖಾತೆಗಳನ್ನು ನೀಡಿ ಹಣ ಹಾಕುವಂತೆ ಸೂಚಿಸಿದ್ದಳು. ಅದರಂತೆ ತಾನು ಸೆ.9ರಿಂದ 25ರ ತನಕ ಹಂತ ಹಂತವಾಗಿ 45,10,000 ರೂ.ವನ್ನು ಅಪರಿಚಿತ ವ್ಯಕ್ತಿ ನೀಡಿದ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದೆ. ಸೆ.25ರಂದು ಮತ್ತೆ 33 ಸಾವಿರ ರೂ. ಪಾವತಿಸುವಂತೆ ಒತ್ತಾಯಿಸಿದಾಗ ತನಗೆ ಅನುಮಾನವಾಯಿತು. ಹಾಗೇ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿರುವ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ತಾನು ಮೋಸ ಹೋಗಿರುವುದು ಗಮನಕ್ಕೆ ಬಂತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಿಲಿಸಿಕೊಂಡಿದ್ದಾರೆ.