×
Ad

ಪರಿಶ್ರಮ, ಪ್ರಾಮಾಣಿಕತೆಗೆ ಸಂದ ಗೌರವ: ಡಾ.ಎಂ.ವೀರಪ್ಪ ಮೊಯ್ಲಿ

Update: 2023-08-26 21:49 IST

ಮಂಗಳೂರು : ಸಾವಿರಾರು ಮಂದಿಯ ಬದುಕಿಗೆ ನೆರಳಾದ, ವಿದ್ಯಾರ್ಥಿಗಳ ಕಲಿಕೆಗೆ ಸದಾ ಅವಕಾಶ ಕಲ್ಪಿಸಿದ, ಕ್ರಿಯಾಶೀಲ ಚಟುವಟಿಕೆಯ ಮೂಲಕ ಸಮಾಜದ ಗಮನ ಸೆಳೆದ ಡಾ. ಎ. ಸದಾನಂದ ಶೆಟ್ಟಿ ಅವರಿಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಅವರ ಸತತ ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಸಂದ ಗೌರವವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಕುವೆಂಪು ವಿವಿ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ ಅವರಿಗೆ ‘ಡಾ.ಎ. ಸದಾನಂದ ಶೆಟ್ಟಿ ಅಭಿನಂದನಾ ಸಮಿತಿ’ಯ ವತಿಯಿಂದ ನಗರದ ಪುರಭವನದಲ್ಲಿ ಶನಿವಾರ ನಡೆದ ಸಾರ್ವಜನಿಕ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಅಭಿನಂದನಾ ಭಾಷಣಗೈದರು.

ಸದಾನಂದ ಶೆಟ್ಟಿಗೆ ಮಂಗಳೂರು ವಿವಿಯು ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಬೇಕಿತ್ತು. ಆದರೆ ನೀಡಿಲ್ಲ. ಹಾಗಂತ ಸದಾನಂದ ಶೆಟ್ಟರು ಬೇಸರಿಸಿದ ವ್ಯಕ್ತಿಯಲ್ಲ. ಯಾವುದೇ ಪ್ರಶಸ್ತಿಗೆ ಲಾಬಿ ಮಾಡಿದವರೂ ಅಲ್ಲ. ತಡವಾಗಿಯಾದರೂ ಕುವೆಂಪು ವಿವಿಯು ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿರುವುದು ಸಂತಸದ ವಿಚಾರವಾಗಿದೆ. ಸದಾನಂದ ಶೆಟ್ಟಿಯ ಯಶಸ್ವಿನ ಹಿಂದೆ ಅವರ ದಿವಂಗತ ಪತ್ನಿಯ ಪ್ರಯತ್ನ ಸಾಕಷ್ಟಿತ್ತು. ಅವರಿಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರನ್ನು ನೆನಪಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.

ಕ್ರೀಡಾಪ್ರೇಮಿಯೂ ಆಗಿದ್ದ ಡಾ.ಎ.ಸದಾನಂದ ಶೆಟ್ಟಿ ಸದಾ ಲವಲವಿಕೆಯ ವ್ಯಕ್ತಿತ್ವ ಹೊಂದಿದ್ದರು. ಅವರಲ್ಲಿ ಸಂಘಟನಾ ಶಕ್ತಿ ಈಗಲೂ ಇದೆ. ಅವರು ತನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆಯೇ ವಿನಃ ಸಮಾಜದಿಂದ ಬೇರೆ ಏನನ್ನೂ ನಿರೀಕ್ಷೆ ಯನ್ನಿಟ್ಟುಕೊಳ್ಳದ ವ್ಯಕ್ತಿಯಾಗಿದ್ದರು. ಸಹೃದಯಿಗಳಾದ ಅವರು ಸದಾಶಯ ಹೊಂದಿದ್ದರು ಎಂದು ಹೇಳಿದರು.

ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಈವರೆಗಿನ ಎಲ್ಲಾ ಹಂತದಲ್ಲೂ ಅವರು ನನಗೆ ಸೂಕ್ತ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ನೀಡಿದ್ದರು. ಜಾತ್ಯತೀತ ಮನೋಭಾವದ ಅವರು ಸರಳ ವ್ಯಕ್ತಿತ್ವ ಹೊಂದಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎ. ಸದಾನಂದ ಶೆಟ್ಟಿ, ನನಗೆ ಈ ಅಭಿನಂದನೆ ಮನಸ್ಸು ತುಂಬಿ ಬಂದಿದೆ. ಸ್ನೇಹಿತರು, ಬಂಧುಗಳು, ಹಿತೈಷಿಗಳು, ಅಭಿಮಾನಿಗಳನ್ನು ಒಂದೆಡೆ ನೋಡುವ ಭಾಗ್ಯ ಸಿಕ್ಕಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮೇಯರ್ ಜಯಾನಂದ ಅಂಚನ್, ಮಾಜಿ ಸಚಿವರಾರ ರಮಾನಾಥ ರೈ, ಅಭಯಚಂದ್ರ ಜೈನ್, ಉದ್ಯಮಿ ಪಾದೆ ಅಜಿತ್ ರೈ, ಸಂಗೀತ ನಿರ್ದೇಶಕ ಗುರುಕಿರಣ್ ಭಾಗವಹಿಸಿದ್ದರು.

ವೇದಿಕೆಯಲ್ಲಿ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಹಾಗೂ ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ, ಶಾಸಕ ಹಾಗೂ ಇಂಟರ್‌ ನ್ಯಾಶನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಉಪಸ್ಥಿತರಿದ್ದರು.

ನ್ಯಾಯವಾದಿ ಹಾಗೂ ಅಭಿನಂದನಾ ಸಮಿತಿಯ ಅಧ್ಯಕ್ಷ ರವೀಂದ್ರನಾಥ ರೈ ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ, ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಈಶ್ವರ ಕಟೀಲು ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News