×
Ad

ಉಚ್ಚಿಲ| ರಸ್ತೆ ಅಪಘಾತ; ಪಾದಚಾರಿ, ಬೈಕ್ ಸವಾರ ಮೃತ್ಯು

Update: 2025-08-10 20:46 IST

ಪಡುಬಿದ್ರಿ: ಉಚ್ಚಿಲ ಪೇಟೆಯಲ್ಲಿ ಬೈಕೊಂದು ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ, ಬೈಕ್ ಸವಾರ ಮೃತಪಟ್ಟಿದ್ದು, ಮಹಿಳೆ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಅಪಘಾತದಲ್ಲಿ ಪಾದಚಾರಿ ಶಂಕರ ಶೆಟ್ಟಿ(65), ಬೈಕ್ ಸವಾರ ದರ್ಶನ್‍ ರಾಜ್(21) ಮೃತಪಟ್ಟಿದ್ದು, ನತಾಶಾ ಎಂಬಾಕೆ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ಉಡುಪಿ ಏಕಮುಖ ರಸ್ತೆಯ ಬದಿಯಲ್ಲಿ ನಿಂತಿದ್ದ ಶಂಕರ ಶೆಟ್ಟಿ ಎಂಬವರಿಗೆ ಸಂಚರಿಸುತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಅವರನ್ನು ಉಡುಪಿಯ ಸರಕಾರಿ ಅಜ್ಜರಕಾಡು ಆಸ್ಪತ್ರೆಗೆ ಕೊಂಡೊಯ್ಯುವಾಗಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಹೆದ್ದಾರಿಗೆ ಎಸೆಯಲ್ಪಟ್ಟು ಬೈಕ್ ಸವಾರ ದರ್ಶನ್‍ರಾಜ್ ತೀವ್ರ ಗಾಯಗೊಂಡಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯರಾತ್ರಿ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಶಂಕರ್ ಶೆಟ್ಟಿ ಅವರು ಮುಂಬೈನಲ್ಲಿ ನಿರ್ಲಾನ್ ಕಂಪೆನಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಬಳಿಕ ಹುದ್ದೆಯನ್ನು ತ್ಯಜಿಸಿ ಹೊಟೇಲ್ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ ಕಾಪುವಿನ ಫ್ಲ್ಯಾಟ್ ಒಂದರಲ್ಲಿ ವಾಸವಿದ್ದರು. ಎರ್ಮಾಳಿನ ತಮ್ಮ ಮೂಲ ಮನೆಗೆ ಬಂದಿದ್ದ ಅವರು ರಾತ್ರಿ ಕಾಪುವಿಗೆ ಹಿಂತಿರುಗುವಾಗ ಈ ಅವಘಡವು ಸಂಭವಿಸಿದೆ. ಮೃತರು ಪತ್ನಿ ಹಾಗೂ ಆಸ್ಟ್ರೇಲಿಯಾದಲ್ಲಿರುವ ಪುತ್ರಿಯನ್ನು ಅಗಲಿದ್ದಾರೆ.

ದರ್ಶನ್‍ರಾಜ್ ಮಂಗಳೂರಿನ ಪಾಂಡೇಶ್ವರ ನಿವಾಸಿಯಾಗಿದ್ದು ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಯಲ್ಲಿನ ಹೊಟೇಲ್ ಮ್ಯಾನೇಜ್‍ಮೆಂಟ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದನು. ಆತನ ಗೆಳತಿ ನತಾಶಾ ಸಹಸವಾರೆಯಾಗಿದ್ದಳು. ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.

ಈ ಪರಿಸರದಲ್ಲಿ ಅಪಘಾತವಾದ ಕೂಡಲೇ ಧಾವಿಸಿಬರುವ ಉಚ್ಚಿಲ ಹಾಗೂ ಮೂಳೂರಿನ ಎಸ್‍ಡಿಪಿಐ ಆಂಬುಲೆನ್ಸ್ ಸಹಾಯದಿಂದ ಜಲಾಲುದ್ದೀನ್ ಜಲ್ಲು, ಕೆ.ಎಂ. ಸಿರಾಜ್, ಹಮೀದ್ ಆಂಬುಲೆನ್ಸ್, ಹನೀಫ್ ಮೂಳೂರು, ಆಸಿಫ್ ಮೂಳೂರು ಹಾಗೂ ಕಲಂದರ್ ಮೂಳೂರು ಸೇರಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು ಮಾನವೀಯತೆ ಮೆರೆದಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News