ಮಂಗಳೂರು| ಯುನಿಟಿ ಹಳೆ ವಿದ್ಯಾರ್ಥಿಗಳ ಸಂಘದ ಎರಡನೇ ಸಭೆ
ಮಂಗಳೂರು: ಯುನಿಟಿ ಹಳೆ ವಿದ್ಯಾರ್ಥಿಗಳ ಸಂಘದ ಪರವಾಗಿ ಬುಧವಾರ ಎರಡನೇ ʼಯುನಿಟಿ ಹಳೆ ವಿದ್ಯಾರ್ಥಿಗಳ ಸಭೆʼಯನ್ನು ಮಂಗಳೂರಿನ ಐಎಂಎ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿತ್ತು.
ಸಭೆಯಲ್ಲಿ ಮಂಗಳೂರಿನ ಹಿರಿಯ ವೈದ್ಯರಾದ ಡಾ. ಮುಹಮ್ಮದ್ ಇಸ್ಮಾಯಿಲ್ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಸಭೆಯು ಹಳೆಯ ನೆನಪುಗಳ ಸ್ಮರಣೆಗೆ ಒಂದು ಅದ್ಭುತ ಅವಕಾಶವಾಗಿದೆ. ಸಭೆಯಲ್ಲಿ ನಾವು ಮತ್ತೆ ಒಂದಾಗುತ್ತೇವೆ, ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುತ್ತೇವೆ, ನೆನಪುಗಳನ್ನು ಮೆಲುಕು ಹಾಕುತ್ತೇವೆ, ನಾನು MBBSಗೆ ಸೇರ್ಪಡೆಯಾಗುವವರೆಗೆ ಯಾವುದೇ ಭಾಷೆಯಲ್ಲಿ ಪರಿಪೂರ್ಣ ಜ್ಞಾನ ಹೊಂದಿರಲಿಲ್ಲ. ಇದರಿಂದಾಗಿ ನನ್ನನ್ನು ಅಪಹಾಸ್ಯ ಮಾಡುತ್ತಿದ್ದರು. ನಾನು ಇದನ್ನು ಒಂದು ಸವಾಲಾಗಿ ತೆಗೆದುಕೊಂಡು ಕಷ್ಟಪಟ್ಟು ಅಭ್ಯಾಸ ಮಾಡಿದೆ. ಅಂತಿಮವಾಗಿ MBBS ಅನ್ನು ಪೂರ್ಣಗೊಳಿಸುವ ವೇಳೆಗೆ ಇಂಗ್ಲೀಷ್ ನಲ್ಲಿ ನಿರರ್ಗಳವಾಗಿ ಮಾತನಾಡಲು ಪ್ರಾರಂಭಿಸಿದೆ. ನೆನಪಿಡಿ, ಏನೂ ಅಸಾಧ್ಯವಲ್ಲ. ಯಾರಾದರೂ ನಿಮ್ಮನ್ನು ಕೀಳಾಗಿ ನೋಡಿದರೆ ಅಥವಾ ಅವಮಾನಿಸಿದರೆ, ಅವರ ಕಲ್ಪನೆ ತಪ್ಪು ಎಂದು ಸಾಬೀತುಪಡಿಸಲು ಅದನ್ನು ಸವಾಲಾಗಿ ತೆಗೆದುಕೊಳ್ಳಿ ಎಂದು ಹೇಳಿದರು.
ಸಭೆಯಲ್ಲಿ ಮಂಗಳೂರಿನ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಬಿ. ವಸಂತಿ ಎಸ್ ಶೆಟ್ಟಿ ಮಾತನಾಡಿ,, ಅಧ್ಯಯನ ಎಂದಿಗೂ ನಿಲ್ಲುವುದಿಲ್ಲ, ಎಲ್ಲಾ ಹಳೆ ವಿದ್ಯಾರ್ಥಿಗಳು ಶ್ರಮವಹಿಸುವಂತೆ ಮತ್ತು ಪ್ರಾಮಾಣಿಕರಾಗಿರಲು ನಾನು ಸಲಹೆ ನೀಡುತ್ತೇನೆ ಮತ್ತು ನೀವು ಎಲ್ಲಿಗೆ ತಲುಪಬೇಕೆಂದು ಬಯಸುತ್ತೀರೋ ಅಲ್ಲಿಗೆ ನೀವು ತಲುಪುತ್ತೀರಿ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಯುನಿಟಿ ಆಸ್ಪತ್ರೆಯ ಅಧ್ಯಕ್ಷರಾದ ಡಾ.ಸಿ.ಪಿ. ಹಬೀಬ್ ರೆಹಮಾನ್ ಅವರು ಮಾತಾಡಿ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ತಮ್ಮ ತಮ್ಮ ಕ್ಷೇತ್ರದಲ್ಲಿ ಅಮೋಘ ಸಾಧನೆಯ ಮೂಲಕ ಹಳೆ ವಿದ್ಯಾರ್ಥಿಗಳು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿದ ಹಬೀಬ್ ರೆಹಮಾನ್ ಅವರು ಕಾರ್ಯಕ್ರಮ ಆಯೋಜಿಸಿದ ಹಳೆ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ನಿರ್ದೇಶಕರಾದ ಅಮೀನಾ ರೆಹಮಾನ್, ಯೆನೆಪೋಯ ಅಜ್ಮಲ್, ಅಶ್ಫಾಕ್ ಮೊಯ್ದೀನ್, ಅಮೆಲ್ ಅನ್ವರ್ ಮತ್ತು ಯೂನಿಟಿ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಯು. ಕೆ. ಖಾಲಿದ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಯುನಿಟಿ ಆಸ್ಪತ್ರೆಯ ಸ್ಥಾಪನೆಯಾದಾಗಿನಿಂದ ಅದರ ಪ್ರಗತಿ ಮತ್ತು ಬೆಳವಣಿಗೆಯ ಕುರಿತು ಜನರಲ್ ಮ್ಯಾನೇಜರ್ ದೇವರಾಜ್ ಮಾತನಾಡಿದರು. ಯುಕೆಯಲ್ಲಿ ಉದ್ಯೋಗದಲ್ಲಿರುವ ಹಳೆ ವಿದ್ಯಾರ್ಥಿನಿ ಶೀಬಾ ಡೊಮಿನಿಕ್ , ಸ್ವಿಝರ್ ಲ್ಯಾಂಡ್ ನಲ್ಲಿರುವ ಹಳೆ ವಿದ್ಯಾರ್ಥಿ ಡೇಟ್ಟಿ ಜೇಕಬ್, ಅಮೆರಿಕದಲ್ಲಿರುವ ಅನ್ನಾ ಚಾಕೋ, ಕುವೈತ್ ನಲ್ಲಿರುವ ಶಶಿಕಲಾ ಪಿ ಎಸ್ ಕೈಮಲ್, ಕುವೈತ್ ನಲ್ಲಿರುವ ರೋಜಾ ಪೀಟರ್, ಓಮನ್ ನಲ್ಲಿರುವ ಅನ್ನಾ ಕುಟ್ಟಿ ಕೆ ಎಂ, ಕೆನಡಾದಲ್ಲಿರುವ ರಜಿ ಮ್ಯಾಥ್ಯುಸ್ ಮತ್ತಿತರರು ಭಾಗವಹಿಸಿದ್ದರು.
ಯುನಿಟಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಬೀನಾ ಪೈಸ್ ಸ್ವಾಗತಿಸಿದರು. ತ್ರಿಶಾ ನಿರೂಪಿಸಿದರು.