ಕಾಂತರಾಜ್ ಆಯೋಗದ ವರದಿ ಬಿಡುಗಡೆ ಮಾಡದಂತೆ ಮೇಲ್ವರ್ಗದ ಲಾಬಿ: ಎಸ್‌ಡಿಪಿಐ ಧರಣಿ
ಮಂಗಳೂರು: ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂತರಾಜ್ ಆಯೋಗದ ವರದಿ ಬಿಡುಗಡೆಯಾಗದಂತೆ ಮೇಲ್ವರ್ಗದ ಭಾರೀ ಲಾಬಿ ನಡೆದಿದೆ. ರಾಜ್ಯ ಸರಕಾರವು ಈ ಲಾಬಿಗೆ ಮಣಿದು ವರದಿ ಬಿಡುಗಡೆಗೆ ಹಿಂದೇಟು ಹಾಕುತ್ತಿವೆ. ಮುಖ್ಯ ಮಂತ್ರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಬದ್ಧತೆ ಇದ್ದರೆ ತಕ್ಷಣ ಈ ವರದಿಯನ್ನು ಸ್ವೀಕರಿಸಿ ಬಿಡುಗಡೆಗೊಳಿಸಬೇಕು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಒತ್ತಾಯಿಸಿದ್ದಾರೆ.
ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿ ಬಿಡುಗಡೆಗೊಳಿಸಬೇಕು ಮತ್ತು ಮುಸ್ಲಿಮರ 2ಎ ಮೀಸಲಾತಿಯನ್ನು ಶೇ.8ಕ್ಕೆ ಏರಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಸಮಿತಿಯು ರಾಜ್ಯಾದ್ಯಂತ ಆರಂಭಿಸಿದ್ದ ಧರಣಿ, ಹಕ್ಕೊತ್ತಾಯದ ಸಮಾರೋಪವನ್ನು ಶುಕ್ರವಾರ ನಗರದ ಮಿನಿ ವಿಧಾನಸೌಧದ ಮುಂದೆ ಉದ್ಘಾಟಿಸಿ ಅವರು ಮಾತನಾಡಿದರು.
ತನ್ನ ಅಧಿಕಾರವಧಿಯ ಕೊನೆಯ ಕ್ಷಣಗಳಲ್ಲಿ ವರದಿ ಬಂದ ಕಾರಣ ಸ್ವೀಕರಿಸಲು ಸಾಧ್ಯವಾಗಲಿಲ್ಲ. ನಂತರ ಬಂದ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ವರದಿ ಸ್ವೀಕರಿಸಬೇಕಿತ್ತು. ಆದರೆ ಅವರು ಆ ವರದಿ ಸ್ವೀಕರಿಸಲು ಆಸಕ್ತಿ ವಹಿಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಹೇಳಿಕೊಳ್ಳುತ್ತಿದ್ದಾರೆ. ಆದರೆ ಆವಾಗ ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದರು. ತಮಗೆ ಆ ವರದಿಯನ್ನು ಸ್ವೀಕರಿ ಸುವ ಹುಮ್ಮಸ್ಸು ಇದ್ದಿದ್ದರೆ ಆವಾಗಲೇ ಅದನ್ನು ಮಾಡಬಹುದಿತ್ತು. ಇದೀಗ ಅಧಿಕಾರಕ್ಕೆ ಬಂದು ನಾಲ್ಕುವರೆ ತಿಂಗಳಾ ದರೂ ಕೂಡ ಕಾಂತರಾಜ್ ವರದಿ ಸ್ವೀಕರಿಸದಿರುವುದು ವಿಪರ್ಯಾಸ ಎಂದು ಅಬ್ದುಲ್ ಮಜೀದ್ ಮೈಸೂರು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಸಂಘಪರಿವಾರವನ್ನು ತೃಪ್ತಿಪಡಿಸುವ ಕೆಲಸ ಮಾಡುತ್ತಿವೆ. ಬಿಜೆಪಿ ಸರಕಾರದ ಅವಧಿಯಲ್ಲಾದ ಹಿಜಾಬ್ ನಿಷೇಧ, ಗೋಹತ್ಯೆ ನಿಷೇಧವನ್ನು ವಾಪಸ್ ಪಡೆಯಲಿಲ್ಲ. ಫೆಲೆಸ್ತೀನ್ ಪರ ಸ್ವತಃ ಕಾಂಗ್ರೆಸ್ ಹೈಕಮಾಂಡ್ ನಿಂತಿವೆ. ಆದರೆ ಫೆಲೆಸ್ತೀನ್ ಪರ ಪೋಸ್ಟ್ ಹಾಕಿದ್ದ ಹೊಸಪೇಟೆಯ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿರುವುದು ಯಾವ ನ್ಯಾಯ ಎಂದು ಅಬ್ದುಲ್ ಮಜೀದ್ ಮೈಸೂರು ಪ್ರಶ್ನಿಸಿದ್ದರು.
ಎಸ್‌ಡಿಪಿಐ ಬಾಗಲಕೋಟೆ ಜಿಲ್ಲಾಧ್ಯಕ್ಷ ಯಮನಪ್ಪ ಗುಣದಾಳ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಮುಸ್ಲಿಮರಿಗೆ, ದಲಿತರಿಗೆ ಅನ್ಯಾಯ ಅಗಿತ್ತು. ಹಾಲಿ ಕಾಂಗ್ರೆಸ್ ಸರಕಾರ ಈ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಕೋಮುವಾದಿ ಬಿಜೆಪಿಗರಂತೆ ಕಾಂಗ್ರೆಸ್ಸಿಗರು ಸೋಗಲಾಡಿಗಳಾಗಬಾರದು ಎಂದರು.
ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಪಕ್ಷದ ಮುಖಂಡರಾದ ಅಥಾವುಲ್ಲಾ ಜೋಕಟ್ಟೆ, ಶಾಹಿದ್ ಅಲಿ, ರಿಯಾಝ್ ಕಡಂಬು, ಅಶ್ರಫ್ ಅಡ್ಡೂರು, ಜಮಾಲ್ ಜೋಕಟ್ಟೆ, ವಿಕ್ಟರ್ ಮಾರ್ಟಿಸ್, ಫಾತಿಮಾ ನಸೀಮಾ, ಆಯಿಶಾ ಬಜ್ಪೆ, ಶಾಹಿದಾ ತಸ್ನೀಮ್, ಮಿಸ್ರಿಯಾ ಕಣ್ಣೂರು ಮತ್ತಿತರರು ಪಾಲ್ಗೊಂಡಿದ್ದರು.
*ಬೆಳಗ್ಗೆ ನಡೆದ ಧರಣಿಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ದ.ಕ. ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮತ್ತಿತರರು ಪಾಲ್ಗೊಂಡಿದ್ದರು.