×
Ad

ಅಮೆರಿಕದ ಯುದ್ಧಕೋರ ನೀತಿಗಳು ದುಡಿಯುವ ವರ್ಗಕ್ಕೆ ಮಾರಕ: ಮಹಾಂತೇಶ್

Update: 2026-03-11 11:16 IST

ಮಂಗಳೂರು: ಅಮೆರಿಕ- ಇಸ್ರೇಲ್ ನ ಯುದ್ಧಕೋರ ನೀತಿಗಳಿಂದಾಗಿ ಜಗತ್ತಿನೆಲ್ಲಡೆ ಯುದ್ಧದ ಕಾರ್ಮೋಡ ಕವಿದಿದ್ದು, ಜನಸಾಮಾನ್ಯರು ತೀವ್ರ ಆತಂಕದಲ್ಲಿದ್ದಾರೆ. ಅಮೆರಿಕನ್ ಸಾಮ್ರಾಜ್ಯಶಾಹಿ ರಾಷ್ಟಗಳು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಅದನ್ನು ಸಮದೂಗಿಸಲು ಪ್ರತೀ ಸಂದರ್ಭದಲ್ಲೂ ಯುದ್ಧವನ್ನೇ ಅಸ್ತ್ರವನ್ನಾಗಿಸಿದೆ.ಇದರಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದು, ದುಡಿಯುವ ವರ್ಗದ ಬದುಕು ಸಂಕಷ್ಟಕ್ಕೀಡಾಗಿದೆ. ಈ ಮೂಲಕ ಅಮೆರಿಕದ ಯುದ್ಧಕೋರ ನೀತಿಗಳು ದುಡಿಯುವ ವರ್ಗಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಸಿಐಟಿಯು ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಹೇಳಿದ್ದಾರೆ.

ಎಪ್ರಿಲ್ 4 ಮತ್ತು 5 ರಂದು ಸಿಐಟಿಯು ಕರ್ನಾಟಕ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರ ಎರಡು ದಿನಗಳ ಕಾಲ ಮಂಗಳೂರಿನಲ್ಲಿ ನಡೆಯಲಿದ್ದು, ಅದರ ಯಶಸ್ವಿಗಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ಹೊರಟಿರುವ ಕೇಂದ್ರ ಸರಕಾರದ ವಿರುದ್ಧ ಸಂಸತ್ತಿನೊಳಗೆ ಪ್ರತಿಭಟನೆಯ ನಾಟಕವಾಡಿದ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದು, ಸಂಹಿತೆಗಳ ವಿರುದ್ಧ ನಿಲ್ಲಬೇಕಾಗಿತ್ತು. ಆದರೆ ಅದೇ ಕಾರ್ಮಿಕ ವಿರೋಧಿ ಸಂಹಿತೆಗಳಿಗೆ ಪೂರಕವಾಗಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ರೀತಿಯಲ್ಲಿ ನಿಯಮಾವಳಿಗಳನ್ನು ರೂಪಿಸಿರುವುದು ಕಾಂಗ್ರೆಸ್ ನ ದ್ವಂದ್ವ ನೀತಿಯ ದ್ಯೋತಕವಾಗಿದೆ ಎಂದು ಟೀಕಿಸಿದರು.

ಸಭೆಯಲ್ಲಿ ಕಾರ್ಯಾಗಾರದ ಯಶಸ್ವಿಗಾಗಿ 101 ಮಂದಿಯನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಕಾರ್ಮಿಕ ನಾಯಕ ಜೆ.ಬಾಲಕೃಷ್ಣ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಬಿ.ಎಂ.ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ್ ಕುಮಾರ್ ಬಜಾಲ್, ಖಜಾಂಚಿಯಾಗಿ ಯೋಗೀಶ್ ಜಪ್ಪಿನಮೊಗರು ಆಯ್ಕೆಯಾದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಬಿ.ಎಂ.ಭಟ್ ಮಾತನಾಡಿ, ಆಳುವ ವರ್ಗಗಳ ಆಕ್ರಮಣಕಾರಿ ನೀತಿಗಳನ್ನು ಸಮರಶೀಲ ಹೋರಾಟಗಳ ಮೂಲಕ ಹಿಮ್ಮೆಟ್ಟಿಸಬೇಕಾದರೆ ಬಲಿಷ್ಠ ಕಾರ್ಮಿಕ ಚಳವಳಿಯಿಂದ ಮಾತ್ರ ಸಾಧ್ಯ. ಅಂತಹ ಚಳವಳಿಯನ್ನು ಕಟ್ಟಲು ನಾಂದಿ ಹಾಡಬೇಕಾದ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಕಾರ್ಯಾಗಾರದ ಮಹತ್ವ ಹಾಗೂ ಅದನ್ನು ಯಶಸ್ವಿಗೊಳಿಸಲು ಬೇಕಾದ ತಯಾರಿಗಳ ಬಗ್ಗೆ ವಿವರಿಸಿದರು.

ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಯಾದವ ಶೆಟ್ಟಿ, ವಸಂತ ಆಚಾರಿ, ಸಂತೋಷ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ವಾಸುದೇವ ಉಚ್ಚಿಲ್, ಬಿ.ಎಂ.ಮಾಧವ, ಮುನೀರ್ ಕಾಟಿಪಳ್ಳ, ಪುರುಷೋತ್ತಮ ಪೂಜಾರಿ, ಮನೋಜ್ ವಾಮಂಜೂರು, ಯೋಗೀಶ್ ಜಪ್ಪಿನಮೊಗರು, ಫ್ಲೇವಿ ಕ್ರಾಸ್ತಾ ಅತ್ತಾವರ, ಯೋಗಿತಾ ಉಳ್ಳಾಲ, ಶೈಲೇಶ್, ರವಿಚಂದ್ರ ಕೊಂಚಾಡಿ ಮತ್ತಿತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News