ಬ್ಯಾರೀಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ʼಉತ್ಸವ 2025ʼ
ಮಂಗಳೂರು : ಬ್ಯಾರೀಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಇತ್ತೀಚಿಗೆ ‘ಉತ್ಸವ 2025’ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಫೇಸ್ ಪೈಂಟಿಂಗ್, ಮೆಹಂದಿ, ಏಕಪಾತ್ರಾಭಿನಯ, ಪುಷ್ಪಗಳನ್ನು ಜೋಡಿಸುವುದ, ರಂಗೋಲಿ, ಚರ್ಚಾಸ್ಪರ್ಧೆ, ಬೆಂಕಿಯಿಲ್ಲದೆ ಅಡುಗೆ ಮಾಡುವ ಸ್ಪರ್ಧೆ, ರೀಲ್ಸ್ ಮಾಡುವುದು, ನಿಧಿ ಬೇಟೆ, ಸೋಲೋ ಮತ್ತು ಸಾಮೂಹಿಕ ಗಾಯನ, ಪೇಪರ್ ಡ್ರೆಸ್ಸಿಂಗ್, ಪಾಶ್ಚಿಮಾತ್ಯ ನೃತ್ಯದಂತಹ ವೈವಿಧ್ಯಮಯ ಸ್ಪರ್ಧೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಸಿಎಸ್ಇ ವಿಭಾಗದ ಆರನೇ ಸೆಮಿಸ್ಟರ್ ವಿದ್ಯಾರ್ಥಿನ ತೇಜಸ್ವಿನಿ ಗೌಡರ ಸ್ವಾಗತ ಭಾಷಣದೊಂದಿಗೆ ಈ ಕಾರ್ಯಕ್ರಮ ಪ್ರಾರಂಭಗೊಂಡಿತು. ನಂತರ ಎಐ ಮತ್ತು ಡಿಎಸ್ ವಿಭಾಗದ ಆರನೆಯ ಸೆಮಿಸ್ಟರ್ ನ ಉತ್ಸಾಹಿ ವಿದ್ಯಾರ್ಥಿನಿಯರಾದ ಫರಿಯಾ ಶೇಖ್ ಹಾಗೂ ಫರ್ಯಾ ನಾಝ್ ಅವರ ನಿರೂಪಣೆಯೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ದೊರೆಯಿತು.
ಬ್ಯಾರೀಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಎಸ್.ಐ.ಮಂಜೂರ್ ಬಾಷಾ ಹಾಗೂ ಬಿಐಇಎಸ್ ನ ಪ್ರಾಂಶುಪಾಲ ಡಾ.ಅಝೀಝ್ ಮುಸ್ತಫ ಅವರು ಮಾತನಾಡಿದರು. ಆ ಬಳಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ದೊರೆಯಿತು.
ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಸಮಾರೋಪಗೊಂಡ ನಂತರ, ಬೇಸಿಕ್ ಸೈನ್ಸ್ ವಿಭಾಗದ ಉಪನ್ಯಾಸಕಿ ಡಾ.ವಿನುತಾ ಅವರು ಈ ವರ್ಷದ ಶೈಕ್ಷಣಿಕ ಸಾಧಕರ ಪಟ್ಟಿಯನ್ನು ಪ್ರಕಟಿಸಿದರು.
ಸಾಂಸ್ಕೃತಿಕ ಸ್ಪರ್ಧೆಯ ವಿಜೇತರ ಹೆಸರುಗಳನ್ನು ಎಐ ಮತ್ತು ಡಿಎಸ್ ನ ವಿಭಾಗದ ಮುಖ್ಯಸ್ಥ ಡಾ.ಮೆಹಬೂಬ್ ಮುಜಾವರ್ ಪ್ರಕಟಿಸಿದರೆ, ಕ್ರೀಡಾ ಸ್ಪರ್ಧೆಗಳ ವಿಜೇತರ ಹೆಸರುಗಳನ್ನು ಸಿವಿಲ್ ವಿಭಾಗದ ಪ್ರಾಧ್ಯಾ ಪಕ ಪ್ರೊ.ಝಹೀರ್ ಅಹ್ಮದ್ ಘೋಷಿಸಿದರು.