ವಿಟ್ಲ| ಸುಳ್ಳು ಸುದ್ದಿ ಪ್ರಚಾರ ಮಾಡಿದ ಆರೋಪ: ʼಹಿಂದೂ ರಿಪಬ್ಲಿಕ್ ಟಿವಿʼ ವಿರುದ್ಧ ಪ್ರಕರಣ ದಾಖಲು
ವಿಟ್ಲ: ಸುಳ್ಳು ಸುದ್ದಿ ಪ್ರಚಾರ ಮಾಡಿದ ಆರೋಪದಲ್ಲಿ ವೆಬ್‌ಸೈಟ್ ಒಂದರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 8 ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಯೊಂದಕ್ಕೆ ಸಂಬಂಧಿಸಿ ʼಹಿಂದೂ ರಿಪಬ್ಲಿಕ್ ಟಿವಿʼ ಎಂಬ ವೆಬ್‌ಸೈಟ್ ನಲ್ಲಿ ಘಟನೆಯ ನೈಜತೆಯನ್ನು ಮರೆಮಾಚಿ ಸುಳ್ಳು ಮಾಹಿತಿಯನ್ನು ಬಿತ್ತರಿಸುವ ಮೂಲಕ ಸಾರ್ವಜನಿಕ ವಲಯಕ್ಕೆ ಸುಳ್ಳು ಸಂದೇಶವನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವೆಬ್‌ಸೈಟ್ ನ ಮಾಲಕ ಹಾಗೂ ಅದರ ಪಾಲುದಾರರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 84/2025 ಕಲಂ: 240 BNS 2023 ರಂತೆ ಪ್ರಕರಣ ದಾಖಲಿಸಲಾಗಿದೆ.
ಯುವಕನೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿ ಜತೆ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ವ್ಯಕ್ತಿ ಹಿಂದೂ ಯುವತಿ ಜತೆ ಮಾತನಾಡುತ್ತೀಯಾ ಎಂದು ಬೆದರಿಕೆ ಒಡ್ಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ವಿಚಾರದಲ್ಲಿ ವೆಬ್‌ಸೈಟ್ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.