ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್‍ಗಳಲ್ಲಿ ಟ್ರಸ್ಟ್ ನ ಸ್ವಯಂಸೇವಕರು ಸೇವೆಗೆ ಲಭ್ಯ-ಶಾಸಕ ರೈ
ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜ ಮುಖಿ ಸೇವೆಗಳನ್ನು ಮಾಡಲಾಗು ತ್ತಿದ್ದು ಜನರ ಆರೋಗ್ಯ ರಕ್ಷಣೆಗಾಗಿ 6 ತಿಂಗಳಿಗೊಮ್ಮೆ ವಿವಿಧ ಆಸ್ಪತ್ಸೆಗಳ ಮೂಲಕ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗವುದು. ಎಲ್ಲಾ 220 ಬೂತ್‍ಗಳಲ್ಲಿಯೂ ಟ್ರಸ್ಟ್‍ನ ಸ್ವಯಂ ಸೇವಕರು ಸೇವೆಗೆ ದೊರೆಯಲಿದ್ದು, ಟ್ರಸ್ಟ್ ನ ಮೂಲಕ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಲಾಗುತ್ತಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಅವರು ಶನಿವಾರ ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಕೆಎಂಸಿ ಆಸ್ಪತ್ರೆ ಅತ್ತಾವರ ಹಾಗೂ ಕೆಎಂಸಿ ಆಸ್ಪತ್ರೆ ಡಾ.ಅಂಬೇಡ್ಕರ್ ವೃತ್ತ ಮಂಗಳೂರು ಇವುಗಳ ಜಂಟಿ ಸಹಯೋಗದಲ್ಲಿ ನಗರದ ದರ್ಬೆ ಬೈಪಾಸ್ ರಸ್ತೆಯ ಆರ್.ಇ.ಬಿ ಎನ್‍ಕ್ಲೇವ್ ಕಟ್ಟಡದಲ್ಲಿರುವ ಟ್ರಸ್ಟ್ ನ ಸಭಾಂಗಣದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಟ್ರಸ್ಟ್ ಮೂಲಕ ಕಳೆದ ಹತ್ತು ವರ್ಷಗಳಿಂದ ಜನ ಸೇವೆ ನೀಡುತ್ತಾ ಬರಲಾಗುತ್ತಿದೆ. ಇತ್ತೀಚೆಗೆ ಚಾಲಕ ತರಬೇತಿ ನೀಡಿ 60 ಮಂದಿಗೆ ಕೆಎಸ್‍ಆರ್‍ಟಿಸಿಯಲ್ಲಿ ಕೆಲಸ ದೊರಕಿಸಿಕೊಡಲಾಗಿದೆ. ಮೂಡಬಿದರೆ ಆಳ್ವಾಸ್‍ನಲ್ಲಿ ನಡೆದ ಉದ್ಯೋಗ ಮೇಳಕ್ಕೆ 350 ಮಂದಿಯನ್ನು ಉಚಿತ ಬಸ್ ಮೂಲಕ ಕಳುಹಿಸಿಕೊಡಲಾಗಿದೆ. ಅನಾರೋಗ್ಯದಲ್ಲಿರುವವರಿಗೆ ಹಾಗೂ ಇಲ್ಲದವರಿಗೂ ತಮ್ಮ ಆರೋಗ್ಯವನ್ನು ತಪಾಸಣೆ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಶಿಬಿರವನ್ನು ಏರ್ಪಡಿಸಲಾಗಿದ್ದು ವರ್ಷಕ್ಕೆ ಎರಡು ಬಾರಿ ನಡೆಯಲಿದೆ. ಇವೆಲ್ಲವನ್ನು ಉಚಿತವಾಗಿ ನೀಡಲಾಗುವುದು ಎಂದ ಅವರು ಸರಕಾರದ ಯಾವುದೇ ಸೌಲಭ್ಯಗಳಿಲ್ಲದ ಬಿಪಿಎಲ್ ಫಲಾನುಭವಿಗಳ ಶಸ್ತ್ರ ಚಿಕಿತ್ಸೆ, ಮಕ್ಕಳ ಹೃದಯ ಸಂಬಂಧಿ ಚಿಕಿತ್ಸೆಗಳಿಗೆ ಆಸ್ಪತ್ರೆ ವೆಚ್ಚವನ್ನು ರೂ. 2 ಲಕ್ಷ ತನಕ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒದಗಿಸಲಾಗುವುದು ಎಂದು ತಿಳಿಸಿದರು.
ನ.13ರಂದು ವಸ್ತ್ರ ವಿತರಣೆ
ಟ್ರಸ್ಟ್ ಮೂಲಕ ಕಳೆದ ಹಲವಾರು ವರ್ಷಗಳಿಂದ ದೀಪಾವಳಿ ಸಂದರ್ಭದಲ್ಲಿ ವಸ್ತ್ರ ವಿತರಿಸಲಾಗುತ್ತಿದ್ದು, ಈ ವರ್ಷವೂ ನ.13ರಂದು ವಸ್ತ್ರ ವಿತರಣೆ ನಡೆಯಲಿದೆ. ಈ ಭಾರಿ ಸುಮಾರು 50,000 ಮಂದಿಗೆ ವಸ್ತ್ರ ವಿತರಿಸಲಾಗುತ್ತಿದ್ದು, ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ ಬೆಡ್‍ಶೀಟ್ ನೀಡಲಾಗುವುದು. ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆಯು ನಡೆಯ ಲಿದೆ. ಈ ಕಾರ್ಯಕ್ರಮ ನಡೆಯುವ ಸ್ಥಳವನ್ನು ಮುಂದೆ ತಿಳಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಕೆಎಂಸಿ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮನಮೋಹನ್ ಮಾತನಾಡಿದರು.
ಟ್ರಸ್ಟ್ ಕಾರ್ಯಾದ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟ್‍ನ ಗೌರವ ಸಲಹೆಗಾರ ಮಹಮ್ಮದ್ ಬಡಗನ್ನೂರು ಕಾರ್ಯ ಕ್ರಮ ನಿರೂಪಿಸಿದರು. ಯೋಗೀಶ್ ಸಾಮಾನಿ ವಂದಿಸಿದರು. ನಿರಂಜನ ರೈ ಮಠಂತಬೆಟ್ಟು, ಶಿವಪ್ರಸಾದ್ ಶೆಟ್ಟಿ, ಶಮೀರ್ ಪೆರುವಾಯಿ, ಗೀತಾ ದಾಸರಮೂಲೆ, ವಿಜಯ ಕುಮಾರ್, ಮೋಹನ್ ಗುರ್ಜಿನಡ್ಕ ಅತಿಥಿಗಳನ್ನು ಗೌರವಿಸಿದರು.
ಶಿಬಿರದಲ್ಲಿ ಎಲುಬು ಮತ್ತು ಕೀಲು, ಗ್ಯಾಸ್ಟೋಎಂಟರಾಲಜಿ, ಮೂತ್ರಶಾಸ್ತ್ರ, ಕಣ್ಣಿನ, ಇಸಿಜಿ, ಹೃದಯ ರೋಗ, ಸಾಮಾನ್ಯ ರೋಗಗಳಿಗೆ ಪ್ರತ್ಯೇಕ ಚಿಕಿತ್ಸಾ ಕೊಠಡಿಗಳು ಮೂಲಕ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿತ್ತು. ಕೆಎಂಸಿ ಆಸ್ಪತೆಯ ತಜ್ಞ ವೈದ್ಯರು ಗಳು ತಪಾಸಣೆ ನಡೆಸಿಕೊಟ್ಟರು. ರಕ್ತದೊತ್ತಡ, ಮಧುಮೇಹ ತಪಾಸಣೆ, ಇಸಿಜಿ, ಔಷಧ ಹಾಗೂ ಓದುವ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು. ಜೊತೆಗೆ ನಗರ ಪ್ರಾಥಮಿಕ ವಿಭಾಗದಿಂದ ಆಭಾ ಕಾರ್ಡ್ ನೋಂದಣಿಯ ಸೌಲಭ್ಯವನ್ನು ಕಲ್ಪಿಸಲಾಗಿತ್ತು.