×
Ad

ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ; ನಾಗರಿಕರಿಂದ ಪಂಪ್‌ ಹೌಸ್‌ ಗೆ ಭೇಟಿ

Update: 2024-02-10 15:28 IST

ಮಂಗಳೂರು, ಫೆ. 10: ನಗರದ ಹಲವು ಭಾಗಗಳಲ್ಲಿ ಐದನೆ ದಿನವಾದ ಶನಿವಾರವೂ ನೀರಿನ ಸಮಸ್ಯೆ ಮುಂದುವರಿದಿದ್ದು, ಕೊಡಿಯಾಲ್‌ಬೈಲ್, ಕಾರ್‌ಸ್ಟ್ರೀಟ್ ಭಾಗದ ಕೆಲ ನಾಗರಿಕರು ಸ್ಥಳೀಯ ಕಾರ್ಪೊರೇಟರ್ ನೇತೃತ್ವದಲ್ಲಿ ಬೆಂದೂರ್‌ವೆಲ್‌ನ ಪಂಪ್‌ಹೌಸ್‌ಗೆ ಭೇಟಿ ನೀಡಿದ ಘಟನೆ ನಡೆಯಿತು.

ಕಾರ್ಪೊರೇಟರ್ ಪೂರ್ಣಿಮಾ ಅವರ ನೇತೃತ್ವದಲ್ಲಿ ಬೆಂದೂರ್‌ವೆಲ್‌ನ ಪಂಪ್‌ಹೌಸ್‌ಗೆ ಬೆಳಗ್ಗೆ ಭೇಟಿ ನೀಡಿದ ನಾಗರಿಕರನೇಕರು ಅಲ್ಲಿ ನೀರು ಪೂರೈಕೆಯ ಸಮಸ್ಯೆಯನ್ನು ಸಿಬ್ಬಂದಿಯಿಂದ ಅರಿತುಕೊಂಡರು.

‘ಮಂಗಳೂರು ಮಹಾನಗರ ಪಾಲಿಕೆಯ ಪೈಪ್‌ಲೈನ್‌ನಿಂದ ನಮ್ಮ ಮನೆಗಳಿಗೆ ಪೂರೈಕೆಯಾಗುವ ನೀರು ಕಳೆದ ಐದು ದಿನಗಳಿಂದ ಅತ್ಯಲ್ಪವಾಗಿ ಬರುತ್ತಿದೆ. ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್‌ಗೆ ಮಾಹಿತಿ ನೀಡಿದ್ದೇವೆ. ನಾಲ್ಕು ದಿನದ ಹಿಂದೆ ತುಂಬೆಯಲ್ಲಿ ಪೈಪ್ ದುರಸ್ತಿ ಕಾರ್ಯಕ್ಕಾಗಿ ನೀರು ಸ್ಥಗಿತಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಬಳಿಕ ಒಂದು ದಿನದಲ್ಲಿ ರಿಪೇರಿಯೂ ಮಾಡಿದ್ದಾರೆ. ಆದರೆ ಮರುದಿನ ನಗರದ ಇನ್ನೊಂದು ಕಡೆ ಪೈಪ್ ಒಡೆದಿದೆ ಎಂದು ಹೇಳಿದುರಸ್ತಿ ಕಾರ್ಯ ಮುಂದುವರಿಸಲಾಯಿತು. ಆದರೆ ನೀರು ಪೂರೈಕೆ ಆರಂಭಿಸಿದರೂ ಮನೆಗಳಿಗೆ ನೀರು ಮಾತ್ರ ಸರಿಯಾಗಿ ಬರುತ್ತಿಲ್ಲ. ಕೆಲವರ ಮನೆಗೆ 10,000 ಲೀಟರ್ ಟ್ಯಾಂಕ್‌ನ ಕೇವಲ ಒಂದು ಅಡಿಯಷ್ಟು ನೀರು ತುಂಬಿದೆ ಎಂದು ಹೇಳುತ್ತಾರೆ. ಕೆಲವು ಅಪಾರ್ಟ್‌ಮೆಂಟ್‌ಗಳವರು ಖಾಸಗಿಯಾಗಿ ಹಣ ಕೊಟ್ಟು ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ನಾವು ವಸ್ತುಸ್ಥಿತಿ ನೋಡಲು ಇಲ್ಲಿ ಬಂದಿದ್ದೇವೆ. ಕುದ್ರೋಳಿ, ಕೊಡಿಯಾಲ್‌ಬೈಲ್, ಕಾರ್‌ಸ್ಟ್ರೀಟ್, ಮಣ್ಣಗುಡ್ಡ ಪ್ರದೇಶಗಳಲ್ಲಿ ನೀರು ಸರಿಯಾಗಿ ಬರುತ್ತಿಲ್ಲ’ ಎಂದು ಕೊಡಿಯಾಲ್‌ಬೈಲ್ ನಿವಾಸಿ ಸತ್ಯನಾರಾಯಣ ಕಾಮತ್ ಹೇಳಿದರು.

‘ನಮಗೆ ಕಳೆದ ಐದು ದಿನಗಳಿಂದ ನೀರಿಲ್ಲ. ನಮ್ಮ ಮನೆಯ ಬಳಿ ಬಾವಿಯೂ ಇಲ್ಲ. ದೂರದ ಮನೆಗಳಿಂದ ಬಾವಿ ನೀರನ್ನು ತರುತ್ತಿದ್ದೇವೆ. ಇಂದು ಸಂಜೆಯೊಳಗೆ ನೀರು ಪೂರೈಕೆ ಆಗುವುದಾಗಿ ಅಧಿಕಾರಿಗಳು ಹೇಳಿದ್ದಾರೆ’ ಎಂದು ಕುದ್ರೋಳಿಯ ವಿದ್ಯಾ ಎಂಬವರು ಹೇಳಿದರು.

‘ಫೆಬ್ರವರಿಯಲ್ಲಿಯೇ ದುರಸ್ತಿಯ ಕಾರಣಕ್ಕೆ ನಾಲ್ಕೈದು ದಿನಗಳಿಂದ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೈ ತೊಳೆಯಲೂ ನೀರಿಲ್ಲ. ಈಗಾಗಲೇ ಅಧಿಕಾರಿಗಳು, ಸಿಬ್ಬಂದಿ ಕ್ರಮ ವಹಿಸುತ್ತಿರುವುದು ಕಂಡು ಬಂದಿದೆ. ಹಾಗಿದ್ದರೂ ನಗರದಲ್ಲಿ ಇಂತಹ ಅಡಚಣೆ, ದುರಸ್ತಿ ಕಾಮಗಾರಿಗಾಗಿ ವಿಳಂಬವಾಗಬಾರದು. ಬೇಸಿಗೆಯಲ್ಲಿ ಇಂತಹ ಸಮಸ್ಯೆ ಉಂಟಾದರೆ ಪರಿಸ್ಥಿತಿ ಬಿಗಡಾಯಿಸಬಹುದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಬೆಸೆಂಟ್ ನಿವಾಸಿ ಮದಲಕ್ಷ್ಮಿ ಎಸ್.ರೈ ಆಗ್ರಹಿಸಿದ್ದಾರೆ.

‘ಪಾಲಿಕೆ ವ್ಯಾಪ್ತಿಗೆ ಪೂರೈಕೆಯಾಗುವ ಎರಡು ಪೈಪ್‌ಲೈನ್‌ಗಳಲ್ಲಿ ಏಕಕಾಲಕ್ಕೆ ಪೂರೈಕೆ ಕಷ್ಟವಾದ ಕಾರಣ, ಮೊದಲು ಪಣಂಬೂರು ಭಾಗದ ಪೈಪ್‌ಲೈನ್‌ಗೆ ಪೂರೈಕೆ ಆರಂಭಿಸಿ ನಾಲ್ಕು ಗಂಟೆಯ ಬಳಿಕ ಇನ್ನೊಂದು ಪೈಪ್‌ಲೈನ್‌ಗೂ ನೀರು ಪೂರೈಕೆ ಆರಂಭಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ನೀರು ಪೂರೈಕೆ ಸಂಪೂರ್ಣವಾಗಿ ಸ್ಥಗಿತವಾಗಿದ್ದ ಕಾರಣ ಎಂಡ್ ಪಾಯಿಂಟ್‌ಗಳಾದ ಸೆಂಟ್ರಲ್, ಬೋಳೂರು, ಬೊಕ್ಕಪಟ್ಣ, ಕುದ್ರೋಳಿ, ಬಂದರು, ಮಣ್ಣಗುಡ್ಡದ ಕೆಲ ಭಾಗ, ವೇರ್ ಹೌಸ್ ಪ್ರದೇಶಗಳಿಗೆ ನೀರು ಸಮರ್ಪಕವಾಗಿ ಪೂರೈಕೆಯಾಗಲು ಎರಡು ದಿನ ಬೇಕಾಗುತ್ತದೆ’ ಎಂದು ಪಾಲಿಕೆಯ ನೀರು ಪೂರೈಕೆ ವಿಭಾಗದ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News