ಡಿ.16ರಂದು ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯ ಸಮಾವೇಶ : ಜ್ಯೋತಿ ಎ.
ಮಂಗಳೂರು, ಡಿ.12: ಬೆಳ್ತಂಗಡಿಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ, ಕೊಲೆ, ಅಸಹಜ ಸಾವುಗಳು, ನಾಪತ್ತೆ ಪ್ರಕರಣಗಳಿಗೆ ಕಾರಣ ಯಾರು ಎಂದು ಪತ್ತೆ ಹಚ್ಚಲು ಒತ್ತಾಯಿಸಿ ವಿವಿಧ ಮಹಿಳಾ ಸಂಘಟನೆಗಳ ಸಹಭಾಗಿತ್ವದ ಕೊಂದವರು ಯಾರು ಅಭಿಯಾನ ಸಮಿತಿಯಿಂದ ಮಹಿಳೆಯರ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ ಡಿ. 16ರಂದು ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ 1,000ದಷ್ಟು ಮಹಿಳೆಯರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅಭಿಯಾನದ ಪ್ರಮುಖರಾದ ಜ್ಯೋತಿ ಎ. ತಿಳಿಸಿದರು.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಹಾಗೂ ಸುತ್ತಮುತ್ತಲಿನಲ್ಲಿ ನಡೆದ ಅಸಹಜ ಸಾವು, ಅತ್ಯಾಚಾರ ಪ್ರಕರಣಗಳಿಗೆ ಕಾರಣ ಯಾರು ಎಂದು ಈವರೆಗೂ ಪತ್ತೆಯಾಗಿಲ್ಲ. ಬೇರೆಡೆ ಇಂತಹ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಯಾಗುತ್ತದೆಯಾದರೂ ಧರ್ಮಸ್ಥಳ ವ್ಯಾಪ್ತಿಯಲ್ಲಿ ಮಾತ್ರ ಆರೋಪಿಗಳ ಪತ್ತೆ ಯಾಕಾಗುವುದಿಲ್ಲ. ವ್ಯವಸ್ಥೆ ಇಷ್ಟು ವರ್ಷಗಳ ಕಾಲ ಏನು ಮಾಡುತ್ತಿದೆ ಎಂಬುದು ಮಹಿಳೆಯರು ಹಾಗೂ ಪ್ರಜ್ಞಾವಂತರ ಪ್ರಶ್ನೆಯಾಗಿದೆ ಎಂದವರು ಹೇಳಿದರು.
ಎಸ್‌ಐಟಿ ವಿಚಾರಣೆಯು ಸಂಪೂರ್ಣವಾಗಿ ಮಹಿಳೆಯರು ಮತ್ತಿತರ ನೊಂದವರಿಗೆ ನ್ಯಾಯ ದೊರಕಿಸುವ ಸುತ್ತ ಕೇಂದ್ರೀಕೃತವಾಗಿರಬೇಕು. ಎಸ್‌ಐಟಿ ರಚಿಸುವಾಗ ಸರಕಾರ ಹೊರಡಿಸಿದ ಆದೇಶದಲ್ಲಿ ಹೇಳಿರುವಂತೆ ಈ ವ್ಯಾಪ್ತಿಯಲ್ಲಿ ದಾಖಲಾಗಿರುವ ಮತ್ತು ದಾಖಲಾಗುವ ಎಲ್ಲ ಅಪರಾಧ ಪ್ರಕರಣಗಳ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಯಾರದ್ದೋ ವಿರುದ್ಧ ನಮ್ಮ ಆರೋಪವಿಲ್ಲ. ಯಾರು ಕೊಂದವರು, ಯಾರು ಅತ್ಯಾಚಾರಿಗಳು ಎಂದು ಬೆಟ್ಟು ಮಾಡುತ್ತಿಲ್ಲ. ಆದರೆ ಆಗಿರುವ ಘಟನೆಗಳ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂಬುದಷ್ಟೇ ನಮ್ಮ ಹೋರಾಟವಾಗಿದೆ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಮುಖಂಡರಾದ ಗೀತಾ ಸುರತ್ಕಲ್, ಸಿಂಧೂ ದೇವಿ, ಕಿರಣ್ ಪ್ರಭ ಉಪಸ್ಥಿತರಿದ್ದರು.
‘ನಮ್ಮ ಹೋರಾಟವನ್ನು ಷಡ್ಯಂತ್ರ, ಕೋರ್ಟ್ ಆದೇಶ ಬಂದಿದೆ ಎನ್ನುವ ರೀತಿಯಲ್ಲಿ ತೇಜೋವಧೆ ನಡೆಸಲಾಗುತ್ತಿದೆ. ಪ್ರತಿಭಟನೆ ಇಲ್ಲ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಾಕಲಾಗುತ್ತಿದೆ. ಇದು ಯಾರ ಷಡ್ಯಂತ್ರ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಕೆಲ ಮಾಧ್ಯಮ ಮೂಲಕ ಈ ರೀತಿಯ ದಿಕ್ಕುತಪ್ಪಿಸುವ ಕೆಲಸ ನಡೆಸುತ್ತಿರುವ ಬಗ್ಗೆ ನಮಗೆ ನೋವಿದೆ. ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿದ್ದೇವೆ. 20 ವರ್ಷಗಳ ಅವಧಿಯಲ್ಲಿ ನಡೆದಿರುವ ಸುಮಾರು 70ರಷ್ಟು ಪ್ರಕರಣಗಳ ತನಿಖೆ ಕೂಲಂಕುಷವಾಗಿ ನಡೆಯಬೇಕು’ ಎಂದು ಪ್ರಸನ್ನ ರವಿ ಹೇಳಿದರು.
ಡಿ. 16ರಂದು 10.30ಕ್ಕೆ ಬೆಳ್ತಂಗಡಿ ಮಾರಿಗುಡಿಯಿಂದ ಮೌನ ಮೆರವಣಿಗೆ ನಡೆಯಲಿದೆ. ಭಿತ್ತಿಪತ್ರಗಳನ್ನು ಹಿಡಿದು ನಡೆಯುವ ಮೆರವಣಿಗೆ ಬಳಿಕ ತಾಲೂಕು ಕಚೇರಿ ಆವರಣದಲ್ಲಿ ಮಹಿಳಾ ನ್ಯಾಯ ಸಮಾವೇಶ ನಡೆಯಲಿದೆ ಎಂದು ಜ್ಯೋತಿ ಎ. ತಿಳಿಸಿದರು.