ಮೊಂಟೆಪದವು: ಸ್ವಲಾತ್ ವಾರ್ಷಿಕ - ಮಾದರಿ ಮದುವೆ, ನಶೆ ಮುಕ್ತ ಸಮಾಜ ಕಾರ್ಯಾಗಾರ
ಮಂಗಳೂರು: ಉಳ್ಳಾಲ ತಾಲೂಕಿನ ಮೊಂಟೆಪದವು ಬದ್ರಿಯಾ ಜುಮಾ ಮಸ್ಜಿದ್ ಇದರ 34ನೇ ವಾರ್ಷಿಕ ಸ್ವಲಾತ್ ಅಂಗವಾಗಿ ಮಾದರಿ ಮದುವೆ ಮತ್ತು ನಶೆ ಮುಕ್ತ ಸಮಾಜ ಕಾರ್ಯಾಗಾರ ನಡೆಯಿತು.
ಮೂರು ದಿನಗಳ ಕಾರ್ಯಕ್ರಮದಲ್ಲಿ ಮೊದಲನೇ ದಿನ ನಶೆ ಮುಕ್ತ ಸಮಾಜ ಎಂಬ ವಿಷಯದಲ್ಲಿ ವಿಶೇಷ ಕಾರ್ಯಾಗಾರವನ್ನು ಇಕ್ಬಾಲ್ ಬಾಳಿಲ ನಡೆಸಿಕೊಟ್ಟರು. ಮಕ್ಕಳ ಬಗ್ಗೆ ತಂದೆ ತಾಯಿಗಳ ಜವಾಬ್ದಾರಿ ಮತ್ತು ಮಕ್ಕಳು ಸುಲಭವಾಗಿ ಪೆಡ್ಲರ್‌ಗಳಿಗೆ ಬಲಿಯಾಗುವುದರ ಬಗ್ಗೆ ವಿವರಿಸಿದರು.
ಧಾರ್ಮಿಕ ಉಪನ್ಯಾಸ ವೇದಿಕೆಯಲ್ಲಿ ಕಾಲದ ಬೇಡಿಕೆಗೆ ಅನುಗುಣವಾಗಿ ಇಂತಹ ಕಾರ್ಯಕ್ರಮವನ್ನು ಸಂಘಟಿಸಿದ್ದಕ್ಕೆ ಇದೊಂದು ಮಾದರಿ ಹೆಜ್ಜೆ ಎಂದು ಜಮಾಅತ್ ಆಡಳಿತ ಸಮಿತಿಯನ್ನು ಶ್ಲಾಘಿಸಿದರು.
ಇನ್ನೊರ್ವ ಸಂಪನ್ಮೂಲ ವ್ಯಕ್ತಿ ಕೆ. ಎಂ. ಸಿದ್ದೀಕ್ ಮೊಂಟುಗೋಳಿ ಮಾತನಾಡಿ, ಮದುವೆ ಹೆಸರಲ್ಲಿ ನಡೆಯುವ ಅನಾಚಾರಗಳು ಇಸ್ಲಾಂ ಸಂಸ್ಕೃತಿ ವಿರೋಧವಾಗಿದೆ ಮತ್ತು ಸರಳ ವಿವಾಹ ಮುಂದಿನ ತಲೆಮಾರಿಗೆ ಮಾದರಿ ಮತ್ತು ಆರ್ಥಿಕ ನಿಯಂತ್ರಣ ಸಾಧಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಎರಡನೇ ದಿನ ಮಂಜನಾಡಿ ಜಮಾಅತ್ ಖತೀಬ್ ಪಿ. ಎ. ಅಹ್ಮದ್ ಬಾಖವಿ ಉಚ್ಚಿಲ ಅವರು ನಶಿಸುತ್ತಿವ ಇಸ್ಲಾಮಿನ ಸಂಸ್ಕೃತಿಯನ್ನು ಕಾಪಾಡುವ ಜವಾಬ್ದಾರಿ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಕೊನೆಯ ದಿನ ಅಸಯ್ಯದ್ ಅಶ್ರಫ್ ತಂಙಳ್ ಅದೂರು ದುಆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಸೀದಿ ಖತೀಬ್ ಬಹು ಸಿದ್ದೀಕ್ ಸಅದಿ ಮಿತ್ತೂರು , ಮಸೀದಿ ಅಧ್ಯಕ್ಷ ಕೆ. ಖಾದರ್ ಮಸೀದಿ ಮತ್ತು ಮದರಸದ ಎಲ್ಲಾ ಉಸ್ತಾದರುಗಳು, ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.