ನೋಟು ನಿಷೇಧದಂತೆಯೇ ಮತದಾರರ ಪಟ್ಟಿ ಪರಿಷ್ಕರಣೆ: ಯೋಗೇಂದ್ರ ಯಾದವ್ ಟೀಕೆ
"ರೋಗವನ್ನು ಗುಣಪಡಿಸುವ ಬದಲು, ಔಷಧವೇ ರೋಗವನ್ನು ಹುಡುಕುತ್ತಿರುವಂತಿದೆ"
ಯೋಗೇಂದ್ರ ಯಾದವ್ | PC : PTI
ಮುಂಬೈ: “ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ರೋಗವನ್ನು ಗುಣಪಡಿಸುವ ಬದಲು, ಔಷಧವೇ ರೋಗವನ್ನು ಹುಡುಕುತ್ತಿರುವಂತಿದೆ. ಹೀಗಾಗಿ, ಈ ಕ್ರಮವು ಸಮಸ್ಯೆಯನ್ನು ಪರಿಹರಿಸುವ ಬದಲು ಇನ್ನೂ ದೊಡ್ಡ ಸಮಸ್ಯೆ ಉಂಟುಮಾಡುವ ಅಪಾಯ ಹೊಂದಿದೆ” ಎಂದು ಸಾಮಾಜಿಕ ಚಿಂತಕ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಇಂಡಿಯಾ ಟುಡೇ ಕಾನ್ಕ್ಲೇವ್ 2025ರಲ್ಲಿ ಮಾತನಾಡಿದ ಅವರು, ಬಿಹಾರದ ಎಸ್ಐಆರ್ ಅನ್ನು ನೋಟು ಅಮಾನೀಕರಣಕ್ಕೆ ಹೋಲಿಸಿ ಟೀಕಿಸಿದರು.
ಯಾದವ್ ಅವರ ಪ್ರಕಾರ, ಎಸ್‌ಐಆರ್ ಕೇವಲ ತಾಂತ್ರಿಕ ತಿದ್ದುಪಡಿ ಅಲ್ಲ, ಮತದಾನದ ಹಕ್ಕಿನ ಮೂಲಭೂತ ಮರುಹೊಂದಿಕೆ ಮಾಡುವ ಪ್ರಕ್ರಿಯೆ. ಮತದಾರರ ಹಕ್ಕನ್ನು ಹೇಗೆ ನಿರ್ಧರಿಸಬೇಕು ಎಂಬ ಪ್ರಕ್ರಿಯೆಯನ್ನೇ ಇದು ಬದಲಾಯಿಸುತ್ತದೆ. ಮತದಾರರ ಪಟ್ಟಿಯಲ್ಲಿರಬೇಕೇ ಬೇಡವೇ ಎಂಬ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರದಿಂದ ಮತದಾರರಿಗೆ ವರ್ಗಾಯಿಸಲಾಗಿದೆ.
ಪ್ರತಿಯೊಬ್ಬ ಮತದಾರರಿಂದ ಪೌರತ್ವದ ದಾಖಲೆಗಳನ್ನು ಕಡ್ಡಾಯವಾಗಿ ಕೇಳಲಾಗುತ್ತಿದೆ. ಹಿಂದೆ ಮಾನ್ಯವಾಗಿದ್ದ 12 ದಾಖಲಾತಿಗಳನ್ನು ಕೈಬಿಟ್ಟು, ಪೌರತ್ವಕ್ಕೆ ನೇರ ಸಂಬಂಧವಿಲ್ಲದ 11 ದಾಖಲಾತಿಗಳನ್ನು ಮಾತ್ರ ಮಾನ್ಯಗೊಳಿಸಲಾಗಿದೆ.
ಆಧಾರ್ ಕಾರ್ಡ್ ಸ್ವೀಕೃತಿಯನ್ನು ನಿರಾಕರಿಸಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ, ಯಾದವ್ “ಇದು ಉದ್ದೇಶಪೂರ್ವಕ ಕ್ರಮ, ಏಕೆಂದರೆ ಆಧಾರ್ ಮಾನ್ಯವಾಗಿದ್ದರೆ ಮತದಾರರ ಪಟ್ಟಿಯಿಂದ ಅನಗತ್ಯ ಹೊರಗಿಡುವಿಕೆ ತಪ್ಪಿಸಬಹುದಿತ್ತು” ಎಂದು ವಾದಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಅವರು “ಎಸ್‌ಐಆರ್ ಪ್ರಕ್ರಿಯೆ ಇಡೀ ದೇಶಕ್ಕೆ ಅಗತ್ಯ. ಇದು ಐದು ವರ್ಷಗಳಿಗೊಮ್ಮೆ ನಡೆಯಬೇಕು” ಎಂದು ಪ್ರತಿಕ್ರಿಯಿಸಿದರು.
ಇನ್ನೋರ್ವ ಅತಿಥಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಪ್ರಕ್ರಿಯೆಯ ಸಮಯ ಸೂಕ್ತವಲ್ಲವೆಂದು ಒಪ್ಪಿಕೊಂಡರೂ, ದತ್ತಾಂಶ ಹೋಲಿಕೆ ಅಕ್ರಮ ಪತ್ತೆಗೆ ಪರಿಣಾಮಕಾರಿ ಎಂದರು.
ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳು ಈ ಪರಿಷ್ಕರಣೆಯನ್ನು “ಮತ ಕಳ್ಳತನ”ಕ್ಕೆ ಸಂಬಂಧಿಸಿದೆ ಎಂದು ಆರೋಪಿಸಿದೆ. ನಕಲಿ ಹೆಸರು ಸೇರಿಸುವುದು ಹಾಗೂ ನಿಜವಾದ ಮತದಾರರನ್ನು ಅಳಿಸುವ ಅಕ್ರಮಗಳು ಆಡಳಿತಾರೂಢ ಬಿಜೆಪಿ ಪರವಾಗಿಯೇ ನಡೆಯುತ್ತಿವೆ ಎಂದು ಟೀಕಿಸಿವೆ. ಆದರೆ ಚುನಾವಣಾ ಆಯೋಗವು ಈ ಆರೋಪಗಳನ್ನು ತಳ್ಳಿಹಾಕಿದೆ.
ಬಿಹಾರದಲ್ಲಿ ಎಸ್‌ಐಆರ್ ಫಲಿತಾಂಶ ಸೆಪ್ಟೆಂಬರ್ 30ರಂದು ಪ್ರಕಟವಾಗಲಿದ್ದು, ಅಕ್ಟೋಬರ್ 7ರಂದು ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಯ ಕಾನೂನುಮಾನ್ಯತೆ ಕುರಿತ ಅಂತಿಮ ವಾದಗಳನ್ನು ಆಲಿಸಲಿದೆ. ನವೆಂಬರ್‌ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆಯಿದೆ.