×
Ad

10 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರಗೈದು ಕೊಲೆ ; ಇಬ್ಬರು ಆರೋಪಿಗಳ ಬಂಧನ

Update: 2024-06-28 21:27 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ದಿಲ್ಲಿಯ ನರೇಲ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು 10 ವರ್ಷದ ಬಾಲಕಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರಗೈದು ಕೊಲೆಗೈದಿದ್ದಾರೆ. ಬಾಲಕಿಯ ಗುರುತು ಸಿಗದಂತೆ ದುಷ್ಕರ್ಮಿಗಳು ಆಕೆಯ ತಲೆಯನ್ನು ಕಲ್ಲುಗಳು ಮತ್ತು ಇಟ್ಟಿಗೆಗಳಿಂದ ಜಜ್ಜಿದ್ದಾರೆ.

ಹೀನ ಕೃತ್ಯಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು 20 ವರ್ಷದ ರಾಹುಲ್ ಮತ್ತು 30 ವರ್ಷದ ದೇವದತ್ತ ಎಂಬುದಾಗಿ ಗುರುತಿಸಲಾಗಿದೆ. ಅವರು ನರೇಲ ಪ್ರದೇಶದಲ್ಲಿರುವ ಎರಡು ಪ್ರತ್ಯೇಕ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಸೆಕ್ಟರ್ 6 ಪ್ರದೇಶದಲ್ಲಿ ಬಾಲಕಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಬಗ್ಗೆ ಗುರುವಾರ ಮಧ್ಯರಾತ್ರಿ ನರೇಲ ಪೊಲೀಸ್ ಠಾಣೆಗೆ ಕರೆಯೊಂದು ಬಂದಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಬಾಲಕಿಯ ಕುಟುಂಬ ಸದಸ್ಯರನ್ನು ಭೇಟಿಯಾದರು.

‘‘ಕರೆ ಬಂದ ಸ್ವಲ್ಪವೇ ಹೊತ್ತಿನ ಬಳಿಕ, ಸಮೀಪದ ಜನವಸತಿಯಿಲ್ಲದ ಸ್ಥಳದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಯಿತು’’ ಎಂದು ಡಿಸಿಪಿ ರವಿಕುಮಾರ್ ಸಿಂಗ್ ಹೇಳಿದರು.

ಊಟವಾದ ಬಳಿಕ, ರಾತ್ರಿ 9:45ರ ಸುಮಾರಿಗೆ ಬಾಲಕಿ ಆಡಲು ಹೊರಗೆ ಹೋಗಿದ್ದಳು ಎಂದು ತಂದೆ ಪೊಲೀಸರಿಗೆ ತಿಳಿಸಿದರು. ಆದರೆ, ಬಾಲಕಿ ಮರಳದಿದ್ದಾಗ ಕುಟುಂಬ ಸದಸ್ಯರು ಹುಡುಕಾಡಿದರು. ಜನ ವಸತಿ ಇಲ್ಲದ ಸ್ಥಳಕ್ಕೆ ರಾಹುಲ್ ಎಂಬ ವ್ಯಕ್ತಿಯು ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವುದನ್ನು ಸ್ಥಳೀಯರು ನೋಡಿದ್ದಾರೆ ಎಂದು ತಂದೆ ಪೊಲೀಸರಿಗೆ ತಿಳಿಸಿದರು.

ಪೊಲೀಸರು ರಾಹುಲ್ನನ್ನು ವಶಕ್ಕೆ ತೆಗೆದುಕೊಂಡರು. ವಿಚಾರಣೆಯ ವೇಳೆ, ಆತ ಕೃತ್ಯದ ಬಗ್ಗೆ ಬಾಯಿಬಿಟ್ಟನು ಎಂದು ಪೊಲೀಸರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News