ಹಿರೋ ಮೋಟೋಕಾರ್ಪ್ ಗೆ ಸೇರಿದ 24.95 ಕೋ.ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಈಡಿ
Photo- PTI
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ)ವು ಹಿರೋ ಮೋಟೊಕಾರ್ಪ್‌ನ ಕಾರ್ಯಕಾರಿ ಅಧ್ಯಕ್ಷ ಪವನ ಮುಂಜಾಲ್ ಅವರಿಗೆ ಸೇರಿದ ದಿಲ್ಲಿಯಲ್ಲಿನ 24.95 ಕೋ.ರೂ.ಮೌಲ್ಯದ ಮೂರು ಸ್ಥಿರಾಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆಯಡಿ ಜಪ್ತಿ ಮಾಡಿದೆ. ಮುಂಜಾಲ್ ವಿದೇಶದಲ್ಲಿ ತನ್ನ ವೈಯಕ್ತಿಕ ವೆಚ್ಚಗಳಿಗಾಗಿ ಇತರ ವ್ಯಕ್ತಿಗಳ ಹೆಸರಿನಲ್ಲಿ ವಿತರಿಸಲಾಗಿದ್ದ ವಿದೇಶಿ ಕರೆನ್ಸಿಯನ್ನು ಬಳಸಿಕೊಂಡಿದ್ದರು. ಆ ಮೂಲಕ ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಈಡಿ ಶುಕ್ರವಾರ ಹೇಳಿಕೆಯಲ್ಲಿ ಆರೋಪಿಸಿದೆ.
ಮುಂಜಾಲ್ ಮತ್ತು ಇತರರು 54 ಕೋ.ರೂ.ಮೌಲ್ಯದ ವಿದೇಶಿ ಕರೆನ್ಸಿಯನ್ನು ದೇಶದಿಂದ ಹೊರಕ್ಕೆ ಒಯ್ದಿದ್ದರು ಎಂದೂ ಅದು ಆಪಾದಿಸಿದೆ. ಈಡಿ ಈ ವರ್ಷದ ಆಗಸ್ಟ್‌ನಲ್ಲಿ ಮುಂಜಾಲ್ ಮತ್ತು ಇತರರ ಮೇಲೆ ದಾಳಿಗಳನ್ನು ನಡೆಸಿತ್ತು.
ಮುಂಜಾಲ್ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ವಿದೇಶಿ ವಿನಿಮಯ/ವಿದೇಶಿ ಕರೆನ್ಸಿಯನ್ನು ಪಡೆದುಕೊಂಡಿದ್ದರು ಮತ್ತು ನಂತರ ಅದನ್ನು ವಿದೇಶದಲ್ಲಿ ತನ್ನ ವೈಯಕ್ತಿಕ ವೆಚ್ಚಕ್ಕಾಗಿ ಬಳಸಿಕೊಂಡಿದ್ದರು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಈಡಿ ಹೇಳಿಕೆಯಲ್ಲಿ ತಿಳಿಸಿದೆ.