ಪಶ್ಚಿಮ ಬಂಗಾಳ | ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ : ಮೂವರು ಆರೋಪಿಗಳ ಬಂಧನ
Photo | indiatoday
ದುರ್ಗಾಪುರ, ಅ. 12: ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಸ್ಥಳೀಯರಾಗಿದ್ದು, ಅವರ ವಿರುದ್ಧ ಸಾಮೂಹಿಕ ಅತ್ಯಾಚಾರ ಹಾಗೂ ಕ್ರಿಮಿನಲ್ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಒಡಿಶಾದ ಜಲೇಶ್ವರ ಮೂಲದ 23 ವರ್ಷದ ವಿದ್ಯಾರ್ಥಿನಿ ದುರ್ಗಾಪುರದ ಶಿವಪುರ ಪ್ರದೇಶದಲ್ಲಿರುವ ಐಕ್ಯೂ ಸಿಟಿ ಮೆಡಿಕಲ್ ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿದ್ದರು. ಕಳೆದ ಶುಕ್ರವಾರ ರಾತ್ರಿ ಆಕೆ ತನ್ನ ಸ್ನೇಹಿತನೊಂದಿಗೆ ಹೊರಗೆ ತೆರಳಿದ ವೇಳೆ, ಕೆಲವು ವ್ಯಕ್ತಿಗಳು ಕಾಲೇಜು ಗೇಟ್ ಬಳಿಯಿಂದ ಅವರನ್ನು ಸುಮಾರು ಒಂದು ಕಿಲೋಮೀಟರ್ ದೂರದ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದರು. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.
ಸಂತ್ರಸ್ತೆಯ ಕುಟುಂಬದ ಪ್ರಕಾರ, ಆಕೆಯ ಸ್ನೇಹಿತನೂ ಅಪರಾಧದಲ್ಲಿ ಭಾಗಿಯಾಗಿದ್ದಾನೆಂಬ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಆಕೆಯ ಮೊಬೈಲ್‌ಫೋನ್ ಹಾಗೂ ರೂ.5,000 ನಗದು ಕಸಿದುಕೊಂಡಿದ್ದಾರೆ.
ಪ್ರಸ್ತುತ ವಿದ್ಯಾರ್ಥಿನಿ ದುರ್ಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಶಶಿ ಪಂಜಾ ಅವರು ಸಂತ್ರಸ್ತೆಗೆ ಅಗತ್ಯ ಸಹಾಯವನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಪೊಲೀಸರು ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದು, ಆಕೆಯ ಸ್ನೇಹಿತ ಸೇರಿದಂತೆ ಹಲವರನ್ನು ವಿಚಾರಣೆಗೊಳಪಡಿಸಿದ್ದಾರೆ. “ಮಹಿಳೆಯರ ಮೇಲಿನ ಅಪರಾಧಗಳ ಕುರಿತು ನಮ್ಮ ಶೂನ್ಯ ಸಹಿಷ್ಣುತೆ ನೀತಿಗೆ ಬದ್ಧರಾಗಿದ್ದೇವೆ. ಘಟನೆಯ ಕುರಿತು ಸುಳ್ಳು ಮಾಹಿತಿಯನ್ನು ಹರಡದಂತೆ ಜನರಿಗೆ ಮನವಿ ಮಾಡುತ್ತೇವೆ” ಎಂದು ಪಶ್ಚಿಮ ಬಂಗಾಳ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಅರ್ಚನಾ ಮಜುಂದಾರ್ ಅವರು ದುರ್ಗಾಪುರದ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿದ್ದಾರೆ. “ಮಹಿಳೆ ಜೊತೆಗೆ ಇದ್ದ ಸ್ನೇಹಿತನ ಪಾತ್ರ ಅನುಮಾನಾಸ್ಪದವಾಗಿದೆ. ಆತ ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿ ಬಳಿಕ ಪರಾರಿಯಾಗಿದ್ದಾನೆ. ಈ ಅಂಶವನ್ನು ಪೊಲೀಸರು ತೀವ್ರವಾಗಿ ಪರಿಶೀಲಿಸಬೇಕು,” ಎಂದು ಹೇಳಿದ್ದಾರೆ.