×
Ad

ಯುಜಿಸಿ ಕರಡು ನಿಯಮಾವಳಿ; ವಿವಿಧ ರಾಜ್ಯಗಳ ಉನ್ನತ ಇಲಾಖೆ ಸಚಿವರು ವಿರೋಧ

Update: 2025-02-06 11:06 IST

business-standard.com

ಬೆಂಗಳೂರು: ವಿಶ್ವವಿದ್ಯಾಲಯ ಧನಸಹಾಯ ಆಯೋಗವು(ಯುಜಿಸಿ) ವಿವಿಗಳ ಕುಲಪತಿಗಳ ನೇಮಕ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಸಂಬಂಧಪಟ್ಟಂತೆ ಜ.5ರಂದು ಹೊರಡಿಸಿರುವ ಕರಡು ನಿಯಮಾವಳಿಗಳಿಗೆ ವಿವಿಧ ರಾಜ್ಯಗಳ ಉನ್ನತ ಇಲಾಖೆಯ ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಶಿಕ್ಷಣ ಸಚಿವರ ರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ತಮಿಳುನಾಡು ಉನ್ನತ ಶಿಕ್ಷಣ ಸಚಿವ ಡಾ. ಗೋವಿ ಚೆಳಿಯನ್, ಕೇರಳ ಉನ್ನತ ಶಿಕ್ಷಣ ಸಚಿವೆ ಡಾ. ಆರ್.ಬಿಂದು, ಹಿಮಾಚಲ ಪ್ರದೇಶ ಶಿಕ್ಷಣ ಸಚಿವ ರೋಹಿತ್ ಥಾಕುರ್, ಜಾಖರ್ಂಡ್ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಸುದಿವ್ಯ ಕುಮಾರ್, ತೆಲಾಂಗಣ ಐಟಿ ಮತ್ತು ಕೈಗಾರಿಕೆ ಸಚಿವ ಶ್ರೀಧರ್ ಬಾಬು ಭಾಗವಹಿಸಿ, ಯುಜಿಸಿ ಕರಡು ನಿಯಮಾವಳಿಗಳಿಗೆ ವಿರೋಧ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಉನ್ನತ ಶಿಕ್ಷಣ ಸಚಿವ ಡಾ. ಚಂದ್ರಕಾಂತ್ ಪಾಟೀಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶದಲ್ಲಿ ಪಾಲ್ಗೊಂಡರು.

ಯುಜಿಸಿ ಕರಡು ನಿಯಮಾವಳಿಗಳು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಶಿಕ್ಷಣವು ಸಮವರ್ತ ಪಟ್ಟಿಯಲ್ಲಿದೆ. ಹೀಗಾಗಿ ಕೇಂದ್ರ ಸರಕಾರವು ನೂತನ ನಿಯಮಾವಳಿಗಳನ್ನು ಜಾರಿ ಮಾಡುವ ಮೂಲಕ ರಾಜ್ಯದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧಿಕಾರ ಹಸ್ತಕ್ಷೇಪ ಮಾಡಲು ಹವಣಿಸುತ್ತಿದೆ. ಆದುದರಿಂದ ಸಮಾವೇಶದಲ್ಲಿ ನಿರ್ಧರಿಸಲಾಗುವ ಅಂಶಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿ ನಿಯಮಾವಳಿಗಳನ್ನು ತಡೆಹಿಡಿಯಬೇಕು ಎಂದು ತೀರ್ಮಾನಿಸಲಾಯಿತು.

ಸಮಾವೇಶದ ನಿರ್ಣಯಗಳು:

1. ರಾಜ್ಯದಲ್ಲಿರುವ ಸಾರ್ವಜನಿಕ ವಿಶ್ವವಿದ್ಯಾನಿಲಯಗಳಿಗೆ ಉಪಕುಲಪತಿಗಳ ನೇಮಕಾತಿಯಲ್ಲಿ ರಾಜ್ಯ ಸರಕಾರಗಳಿಗೆ ಪ್ರಾಮುಖ್ಯತೆ ನೀಡಬೇಕು. ಅದರೆ ಕರಡು ಯುಜಿಸಿ ನಿಯಮಾವಳಿಗಳು ರಾಜ್ಯ ಕಾಯಿದೆಗಳ ಅಡಿಯಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಯಲ್ಲಿ ರಾಜ್ಯ ಸರಕಾರಗಳಿಗೆ ಅವಕಾಶ ಕಲ್ಪಿಸುವುದಿಲ್ಲ.

2. ವಿವಿಗಳ ಉಪಕುಲಪತಿ ಆಯ್ಕೆಗಾಗಿ ಶೋಧನಾ ಸಮಿತಿಗಳನ್ನು ರಚಿಸುವಲ್ಲಿ ರಾಜ್ಯ ಸರಕಾರಕ್ಕೆ ಇರುವ ಹಕ್ಕುಗಳನ್ನು ಮೊಟಕುಗೊಳಿಸಬಾರದು.

3. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಡದವರನ್ನು ಉಪಕುಲಪತಿಗಳಾಗಿ ನೇಮಿಸುವುದನ್ನು ಹಿಂತೆಗೆದುಕೊಳ್ಳಬೇಕು.

4. ಉಪಕುಲಪತಿಗಳ ನೇಮಕಾತಿಗೆ ಅರ್ಹತೆಗಳು, ಅವಧಿ ಮತ್ತು ಅರ್ಹತೆಗಳು ಉನ್ನತ ಶಿಕ್ಷಣದ ಮಾನದಂಡಗಳ ಮೇಲೆ ಪ್ರಭಾವ ಬೀರುವುದರಿಂದ ನಿಯಮಾವಳಿಗಳ ಮರುಪರಿಶೀಲನೆಯ ಅಗತ್ಯವಿದೆ.

5. ಅಕಾಡೆಮಿಕ್ ಪರ್ಫಾರ್ಮೆನ್ಸ್ ಇಂಡಿಕೇಟರ್(ಎಪಿಐ) ಮೌಲ್ಯಮಾಪನ ವ್ಯವಸ್ಥೆಯನ್ನು ತೆಗೆದುಹಾಕಬೇಕು.

6. ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಇರುವ ನಿಬಂಧನೆಗಳನ್ನು ಮರುಪರಿಶೀಲನೆಯ ಅಗತ್ಯವಿದೆ.

7. ಮಾರ್ಗಸೂಚಿಗಳನ್ನು ಅಂತಿಮಗೊಳಿಸುವ ಮೊದಲು ಗುತ್ತಿಗೆ ನೇಮಕಾತಿ/ಅತಿಥಿ ಅಧ್ಯಾಪಕರು/ಸಂದರ್ಶಕ ಅಧ್ಯಾಪಕರು/ ವಿಶ್ರಾಂತ ಪ್ರಾಧ್ಯಾಪಕರುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸ್ಪಷ್ಟತೆಯನ್ನು ನೀಡಬೇಕು.

8. ಕರಡು ಯುಜಿಸಿ ನಿಯಮಾವಳಿಗಳ ಉಲ್ಲಂಘನೆಗೆ ವಿಧಿಸಿರುವ ಶಿಕ್ಷೆಗಳು ಕಠೋರ, ಪ್ರಜಾಸತ್ತಾತ್ಮಕವಲ್ಲ. ಹೀಗಾಗಿ ಮರುಪರಿಶೀಲನೆಯ ಅಗತ್ಯವಿರುತ್ತದೆ.

9. ಎನ್‍ಇಪಿಯನ್ನು ಕಡ್ಡಾಯವಾಗಿ ಹೇರುವುದು, ಅಳವಡಿಸಿಕೊಳ್ಳದಿದ್ದಲ್ಲಿ, ದಂಡದ ಕ್ರಮಗಳನ್ನು ತೆಗೆದುಕೊಳ್ಳುವುದು, ನಿಜವಾಗಿಯೂ ಸರ್ವಾಧಿಕಾರಿ ಮತ್ತು ಫೆಡರಲ್ ಚೌಕಟ್ಟಿನಲ್ಲಿ ರಾಜ್ಯಗಳ ಸ್ವಾಯತ್ತತೆಯ ಮನೋಭಾವಕ್ಕೆ ವಿರುದ್ಧವಾಗಿದೆ.

10. ಸಾರ್ವಜನಿಕ ವಿವಿಗಳಲ್ಲಿ ನಾವೀನ್ಯತೆ ಮತ್ತು ಸಂಶೋಧನಾ ವ್ಯವಸ್ಥೆಯನ್ನು ಹೆಚ್ಚಿಸಲು ಉದ್ಯಮದ ಅಕಾಡೆಮಿಯ ಮೇಲೆ ಹೆಚ್ಚಿನ ಒತ್ತು ನೀಡಬೇಕು.

11. ಕರಡು ನಿಯಮಾವಳಿಗಳು ಮತ್ತು ಗ್ರೇಡಿಂಗ್ ಪ್ಯಾರಾಮೀಟರ್‍ಗಳನ್ನು ಖಾಸಗಿ ಸಂಸ್ಥೆಗಳನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ, ಸರಕಾರಿ/ಸಾರ್ವಜನಿಕ ಸಂಸ್ಥೆಗಳ ಕಲ್ಯಾಣ ಅಂಶವನ್ನು ಕಡೆಗಣಿಸಲಾಗಿದೆ.

12. ಪದವಿ ಕೋರ್ಸ್‍ಗಳಿಗೆ ಪ್ರವೇಶ ಪರೀಕ್ಷೆಯನ್ನು ಕಡ್ಡಾಯಗೊಳಿಸುವುದು ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿದೆ.

13. ಪ್ರಚಾರಗಳು, ದ್ವೈವಾರ್ಷಿಕ ಪರೀಕ್ಷೆಗಳು, ಫಾಸ್ಟ್-ಟ್ರ್ಯಾಕ್ ಪದವಿ ಕಾರ್ಯಕ್ರಮಗಳು, ಏಕ ಕಾಲದಲ್ಲಿ ಎರಡು ಪದವಿಗಳು ಇತ್ಯಾದಿ, ಅನುಷ್ಠಾನಕ್ಕೆ ಹೆಚ್ಚಿನ ಚರ್ಚೆ ಅಗತ್ಯವಿದೆ.

14. ಒಕ್ಕೂಟ ವ್ಯವಸ್ಥೆಯನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ಕರಡು ಯುಜಿಸಿ ನಿಯಮಗಳ ಬಗ್ಗೆ ರಾಜ್ಯಗಳೊಂದಿಗೆ ಹೆಚ್ಚಿನ ಚರ್ಚೆ ನಡೆಯಬೇಕಿದೆ.

15. ಒಟ್ಟಾರೆಯಾಗಿ ಕರಡು ಯುಜಿಸಿ ನಿಯಮಗಳು-2025 ಅನ್ನು ತಕ್ಷಣವೇ ಹಿಂತೆಗೆದುಕೊಳ್ಳುವ ಅವಶ್ಯಕತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News