‘ವಿಕಸಿತ ಭಾರತ’ ಆಗಲು ಶೇ.6.5 ಜಿಡಿಪಿ ಬೆಳವಣಿಗೆ ಸಾಲುವುದಿಲ್ಲ: ನೀತಿ ಆಯೋಗ ಸಿಇಒ
ಬಿವಿಆರ್ ಸುಬ್ರಹ್ಮಣ್ಯಂ (Photo credit: niti.gov.in)
ಹೊಸದಿಲ್ಲಿ: ದೇಶವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗುವ ಗುರಿಯನ್ನು ಸಾಧಿಸಲು ಬಯಸಿದ್ದರೆ ಭಾರತದ ವಾರ್ಷಿಕ ಒಟ್ಟು ದೇಶಿಯ ಉತ್ಪನ್ನದ(ಜಿಡಿಪಿ) ಬೆಳವಣಿಗೆಯು ಶೇ.8 ಆಗಿರಬೇಕು, ಶೇ.6.5 ಅಲ್ಲ ಎಂದು ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಒ) ಬಿವಿಆರ್ ಸುಬ್ರಹ್ಮಣ್ಯಂ ಅವರು ಹೇಳಿದ್ದಾರೆ.
ಗುರುವಾರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿಯ ಸಾಂಖ್ಯಿಕ ಸಲಹೆಗಾರರ ಸಭೆಯಲ್ಲಿ ಮಾತನಾಡಿದ ಅವರು ನೀತಿ ನಿರೂಪಣೆಯಲ್ಲಿ ಅಂಕಿಅಂಶಗಳ ಪ್ರಮುಖ ಪಾತ್ರವನ್ನು ಬೆಟ್ಟು ಮಾಡಿದರು.‘ನಮ್ಮ ವಿಕಸಿತ ಭಾರತ ಗುರಿಗೆ ಈ ದತ್ತಾಂಶಗಳು ಬಹಳ ಮುಖ್ಯವಾಗಿವೆ. ನೀವು ಶೇ.6.5ರಷ್ಟು ಬೆಳವಣಿಗೆ ಸಾಧಿಸಿದರೆ ವಿಕಸಿತ ಭಾರತವಾಗುವುದಿಲ್ಲ. ನೀವು ಶೇ.8ರಷ್ಟು ಬೆಳವಣಿಗೆ ಸಾಧಿಸಿದರೆ ವಿಕಸಿತ ಭಾರತವಾಗುತ್ತೀರಿ. ಶೇ.1.5ರ ವ್ಯತ್ಯಾಸ ತುಂಬ ಚಿಕ್ಕದಾಗಿ ಕಾಣುತ್ತದೆ, ಆದರೆ 2047ರಲ್ಲಿ ಈ ವ್ಯತ್ಯಾಸವು ಅಗಾಧವಾಗಿರುತ್ತದೆ. ಈಗ ಬಹಳ ಚಿಕ್ಕದಾಗಿ ಕಾಣುವುದು ಕೊನೆಯಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡಬಹುದು’ ಎಂದು ಹೇಳಿದರು.
ಭಾರತವು ಸ್ವಾತಂತ್ರ್ಯದ ನೂರು ವರ್ಷಗಳನ್ನು ಪೂರೈಸುವ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಲು ದೇಶಕ್ಕೆ ಕೇವಲ ಶೇ.6ರಿಂದ ಶೇ.6.2ರಷ್ಟು ನೈಜ ಜಿಡಿಪಿ ಬೆಳವಣಿಗೆ ದರದ ಅಗತ್ಯವಿದೆ ಎಂದು ನೀತಿ ಆಯೋಗದ ಸದಸ್ಯ ಅರವಿಂದ ವೀರಮಣಿ ಅವರು ಮಾರ್ಚ್‌ನಲ್ಲಿ ಹೇಳಿದ್ದರು.
ಮೇ 30ರಂದು ಕೇಂದ್ರ ಸರಕಾರವು ಬಿಡುಗಡೆಗೊಳಿಸಿದ್ದ ತಾತ್ಕಾಲಿಕ ಅಂದಾಜುಗಳು 2024-25ರ ವಿತ್ತವರ್ಷದಲ್ಲಿ ಭಾರತದ ನೈಜ ಜಿಡಿಪಿ ಶೇ.6.5ರಷ್ಟು ಬೆಳೆದಿರುವುದನ್ನು ತೋರಿಸಿತ್ತು.
2020-21ರ ಕೋವಿಡ್ ಸಾಂಕ್ರಾಮಿಕ ವರ್ಷದ ಬಳಿಕ ಅತ್ಯಂತ ನಿಧಾನಗತಿಯ ಬೆಳವಣಿಗೆ ದರ ಇದಾಗಿದ್ದು,2023-24ರ ವಿತ್ತವರ್ಷದಲ್ಲಿ ದೇಶದ ನೈಜ ಜಿಡಿಪಿ ಶೇ.9.2ರಷ್ಟಿತ್ತು.
ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ಸುಬ್ರಹ್ಮಣ್ಯಂ ಅವರ ಈ ಹೇಳಿಕೆ ಹೊರಬಿದ್ದಿದೆ.